ರಾಜ್ಯ

ಮೆಮು, ಡೆಮು ರೈಲುಗಳಲ್ಲಿ ಮಹಿಳೆಯರಿಗೆ ಹೆಚ್ಚುವರಿ ಬೋಗಿಗಳು

Sumana Upadhyaya

ಬೆಂಗಳೂರು: ಮೈಸೂರು-ಬೆಂಗಳೂರು ಮಧ್ಯೆ ಜನದಟ್ಟಣೆ ಅವಧಿಯಲ್ಲಿ ಮಹಿಳೆಯರಿಗೆ ವಿಶೇಷ ರೈಲು ಒದಗಿಸಬೇಕೆಂದು ಇತ್ತೀಚೆಗೆ ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಷ್ ರೈಲ್ವೆ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು ಎಂದು ಸುದ್ದಿಯಾಗಿತ್ತು.


ಇದಕ್ಕೆ ಸಾರ್ವಜನಿಕರಿಂದಲೂ ಸಾಕಷ್ಟು ಬೆಂಬಲ ಮತ್ತು ಒತ್ತಾಯ ಕೇಳಿಬಂದಿರುವುದರಿಂದ ಬೆಂಗಳೂರು ರೈಲ್ವೆ ವಿಭಾಗ ಕಾರ್ಯಪ್ರವೃತ್ತವಾಗಿದೆ. ಬೆಂಗಳೂರು ನಗರದಿಂದ ಸುತ್ತಮುತ್ತಲ ಪ್ರದೇಶಗಳಿಗೆ ಪ್ರತಿನಿತ್ಯ ಸಂಚರಿಸುವ 50 ಮೆಮು ರೈಲು(Mainline Electric Multiple Unit ) ಮತ್ತು 25 ಡೆಮು(Diesel Electric Multiple Unit) ರೈಲುಗಳಲ್ಲಿ ಪ್ರತ್ಯೇಕ ಮಹಿಳಾ ಕೋಚ್ ಗಳನ್ನು ಅಳವಡಿಸಲು ಸಜ್ಜಾಗಿದೆ.


ಬೆಂಗಳೂರು ವಿಭಾಗ ರೈಲ್ವೆ ವ್ಯವಸ್ಥಾಪಕ ಎ ಕೆ ವರ್ಮ ಮಾತನಾಡಿ, ನೀಲನಕ್ಷೆ ಸಿದ್ದವಾಗಿದೆ. ಬೆಂಗಳೂರು-ಮೈಸೂರು ಮತ್ತು ಬೆಂಗಳೂರು-ಬಂಗಾರಪೇಟೆ ವಿಭಾಗದಲ್ಲಿ ರೈಲ್ವೆ ಸಂಚಾರವನ್ನು ಆರಂಭಿಸುತ್ತೇವೆ. ಮಹಿಳೆಯರಿಗೆ ಪ್ರತ್ಯೇಕ ಬೋಗಿ ಒದಗಿಸಲು ನಾವು ಹೆಚ್ಚುವರಿ ಬೋಗಿಗಳನ್ನು ಒದಗಿಸುತ್ತೇವೆ ಎಂದರು.


ಬೆಂಗಳೂರು-ಮೈಸೂರು ಮಧ್ಯೆ ಮಹಿಳೆಯರಿಗೆ ವಿಶೇಷ  ರೈಲು ಸಂಚಾರ ಮಾಡಲು ಸಾಧ್ಯವಿಲ್ಲ. ಎರಡೂ ನಗರಗಳ ಮಧ್ಯೆ ಪ್ರತಿದಿನ ಹಲವು ಕುಟುಂಬದವರು ಒಟ್ಟಿಗೆ ಸಂಚರಿಸುತ್ತಾರೆ. ಹೀಗಿರುವಾಗ ಕೇವಲ ಮಹಿಳೆಯರು ಮಾತ್ರ ರೈಲಿಗೆ ಹತ್ತಿ, ಪುರುಷರು ಬೇರೆ ರೈಲಿನಲ್ಲಿ ಬನ್ನಿ ಎಂದು ಹೇಳುವುದು ಹೇಗೆ, ಅದರ ಬದಲು ಮಹಿಳೆಯರಿಗೆ ಹೆಚ್ಚು ಬೋಗಿಗಳನ್ನು ನೀಡಬಹುದು ಎಂದು ಇತ್ತೀಚೆಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದ್ದರು.


8 ಬೋಗಿಯ ಡೆಮು ರೈಲಿನಲ್ಲಿ ಒಂದು ಮಹಿಳಾ ಬೋಗಿ, 8ರಿಂದ 16ರವರೆಗಿನ ಬೋಗಿಗಳ ಮೆಮು ರೈಲಿನಲ್ಲಿ ಒಂದು ಮತ್ತು ಎರಡು ಬೋಗಿಗಳನ್ನು ಮಹಿಳಾ ಬೋಗಿಗಳನ್ನು ಮೀಸಲಿಡಲಾಗುವುದು ಎಂದು ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ. 

SCROLL FOR NEXT