ಚಾಮರಾಜನಗರ: ಹುಲಿಯೊಂದು ರೈತನ ಮೇಲೆ ದಾಳಿ ಮಾಡಿ ಕೊಂದು ಅಂಗಾಂಗಗಳನ್ನೇ ತಿಂದ ಅಮಾನುಷ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಚೌಡಹಳ್ಳಿ ಸಮೀಪ ನಡೆದಿದೆ.
ಶನಿವಾರ ಸಂಜೆ ನಡೆದ ಘಟನೆಯಲ್ಲಿ ರೈತ ಚೌಡಹಳ್ಳಿ ಗ್ರಾಮದ ಶಿವಮಾದಯ್ಯ (66) ಹುಲಿ ದಾಳಿಯಿಂದ ಸಾವನ್ನಪ್ಪಿದ್ದಾನೆ.
ಬಂಡೀಪುರ ಹುಲಿ ಅಭಯಾರಣ್ಯದ ಕುಂದಕೆರೆ ವಲಯದ ಬರಕಟ್ಟೆ ಬಳಿ ತನ್ನ ಎತ್ತುಗಳೊಡನೆ ಗ್ರಾಮಕ್ಕೆ ಹಿಂತಿರುಗಿತ್ತಿದ್ದ ರೈತ ಶಿವಮಾದಯ್ಯನ ಮೇಲೆ ಹುಲಿ ದಾಳಿ ಮಾಡಿದೆ.
ಎತ್ತುಗಳು ಮಾತ್ರವೇ ಮನೆಗೆ ಆಗಮಿಸಿದ್ದನ್ನು ಕಂಡ ಗ್ರಾಮಸ್ಥರು ಅನುಮಾನಗೊಂಡು ಶೋಧ ನಡೆಸಿದಾಗ ಹುಲಿದಾಳಿಯಿಂದ ಮೃತಪಟ್ಟ ಶಿವಮಾದಯ್ಯನ ಶವ ಪತ್ತೆಯಾಗಿದೆ.ಘಟನೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.