ರಾಜ್ಯ

'ನಾವು ರಾತ್ರೋ ರಾತ್ರಿ ಶ್ರೀಮಂತರಾದವರಲ್ಲ: ನನ್ನ ಮಗನ ಬೆಳವಣಿಗೆ ನೋಡಿ ಬಿಜೆಪಿಯವರಿಗೆ ಹೊಟ್ಟೆಕಿಚ್ಚು'

Shilpa D

ರಾಮನಗರ:  ಬಿಜೆಪಿ ಅಥವಾ ಬೇರೆ ಯಾರೇ ಆಗಲಿ ನನ್ನ ಮಗನನ್ನು ಏನೂ ಮಾಡಲು ಸಾಧ್ಯವಿಲ್ಲ, ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ತಾಯಿ ಗೌರಮ್ಮ ಹೇಳಿದ್ದಾರೆ.

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯಲ್ಲಿ ಮಾತನಾಡಿದ ಗೌರಮ್ಮ, ಗಣೇಶ ಹಬ್ಬದ ದಿನದಂದು ತಮ್ಮ ಪೂರ್ವಿಕರಿಗೆ ಎಡೆಯಿಟ್ಟು, ಅವರ ಸಮಾಧಿಗೆ ಪೂಜೆ ಸಲ್ಲಿಸಲು ಮಾಜಿ ಸಚಿವ ಡಿ. ಕೆ ಶಿವಕುಮಾರ್‌ ಅವರಿಗೆ ಜಾರಿ ನಿರ್ದೇಶನಾಲಯ ಅವಕಾಶ ನೀಡದ ಹಿನ್ನೆಲೆ ಮನೆಗೆ ಬಾರದ ಡಿಕೆಶಿ ನೆನೆದು ತಾಯಿ ಗೌರಮ್ಮ ಕಣ್ಣೀರಿಟ್ಟಿದ್ದಾರೆ. 

ಪ್ರತಿ ವರ್ಷ ಇಬ್ಬರು ಮಕ್ಕಳು ಮನೆಗೆ ಬರುತ್ತಿದ್ದರು. ಯಾವುದೇ ಕೆಲಸಗಳಿದ್ದರು ತಪ್ಪಿಸದೆ ಪೂರ್ವಿಕರ ಸಮಾಧಿಗಳಿಗೆ ಎಡೆ ಇಟ್ಟು ಪೂಜೆ ಸಲ್ಲಿಸುತ್ತಿದ್ದರು ಎಂದು ಗೌರಮ್ಮ ತಿಳಿಸಿದ್ದಾರೆ. 

ಇಡಿ‌ ಸಮನ್ಸ್ ಜಾರಿಯಿಂದ ಈ ಬಾರಿ ಹಬ್ಬಕ್ಕೆ ಇಬ್ಬರು ಮಕ್ಕಳು ಬಂದಿಲ್ಲ. ನನ್ನ ಮಗ ಕೊಲೆ ಸುಲಿಗೆ ದರೋಡೆ ಮಾಡಿಲ್ಲ. ವ್ಯಾಪಾರ ವ್ಯವಹಾರ ನಡೆಸಿದ್ದಾರೆ ಅಷ್ಟೆ. ಅದು ಮಾಡುವುದು ತಪ್ಪೇ?  ನಾವು ರಾತ್ರೋ ರಾತ್ರಿ ಶ್ರೀಮಂತರಾಗಿಲ್ಲ,  ನನ್ನ ಮಾವ  ಕೆಂಪೇಗೌಡ ಊರಿನಲ್ಲಿ  ದೊಡ್ಡ ಹೆಸರು ಮಾಡಿದ್ದವರು, ಬಿಜೆಪಿಯವರು ನನ್ನ ಮಗನ ರಾಜಕೀಯ ಬೆಳವಣಿಗೆ ಸಹಿಸದೇ ಹೊಟ್ಟೆಕಿಚ್ಚಿನಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಮಕ್ಕಳನ್ನ ನೆನಪಿಸಿಕೊಂಡು ತಾಯಿ ಗೌರಮ್ಮ ಕಣ್ಣೀರಿಟ್ಟಿದ್ದಾರೆ. 

ಪುರಾತನ ಕಾಲದಿಂದ ನಡೆದು ಬಂದ ಸಂಪ್ರದಾಯದಂತೆ ಗಣೇಶ ಹಬ್ಬದ ದಿನದಂದು ಪೂರ್ವಿಕರ ಸಮಾಧಿಗಳಿಗೆ ಎಡೆ ಇಟ್ಟು, ಅವರ ಸಮಾಧಿಗೆ ಪೂಜೆ ಸಲ್ಲಿಸುತ್ತಾರೆ. ಜಾರಿ ನಿರ್ದೇಶನಾಲಯ(ಇಡಿ) ಡಿ. ಕೆ ಶಿವಕುಮಾರ್ ಅವರನ್ನು ಸಮನ್ಸ್ ನೀಡಿ ದಿಲ್ಲಿಗೆ ಕರೆಸಿಕೊಂಡು ಕಳೆದ ಮೂರು ದಿನಗಳಿಂದ ವಿಚಾರಣೆ ನಡೆಸುತ್ತಿರುವುದರಿಂದ ಹಬ್ಬಕ್ಕೆ ಆಗಮಿಸಲು ಸಾಧ್ಯವಾಗಿಲ್ಲ. 

ಪೂರ್ವಿಕರ ಸಮಾಧಿಗೆ ಎಡೆ ಇಡುವ ನಿಟ್ಟಿನಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದರು. ಆದರೆ ಇಡಿ ತನಿಖಾಧಿಕಾರಿಗಳು ಡಿಕೆಶಿ ಮನವಿಯನ್ನು ತಳ್ಳಿಹಾಕಿದ್ದರು. 

SCROLL FOR NEXT