ರಾಜ್ಯ

ಘಟನೆಯಲ್ಲಿ ಬಲಿಪಶು ಆದವರ ಪರ ನ್ಯಾಯ ಒದಗಿಸಿ; ಕೆಳ ನ್ಯಾಯಾಲಯಗಳಿಗೆ ಹೈಕೋರ್ಟ್ ಆದೇಶ 

Sumana Upadhyaya

ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಜೀವ ಕಳೆದುಕೊಂಡ ಅಥವಾ ಗಾಯಗೊಂಡವರ ಅವಲಂಬಿತರಿಗೆ ಸೂಕ್ತ ಪರಿಹಾರ ನೀಡಲು ಸರಿಯಾದ ಮಾರ್ಗದರ್ಶನ ಹೊರಡಿಸಿ ಎಂದು ರಾಜ್ಯ ಹೈಕೋರ್ಟ್ ಅಧೀನ ನ್ಯಾಯಾಲಯಗಳಿಗೆ ಮತ್ತು ರಾಜ್ಯಾದ್ಯಂತ ಇರುವ ಪಬ್ಲಿಕ್ ಪ್ರಾಸಿಕ್ಯೂಟರ್ ಗಳಿಗೆ ಆದೇಶ ನೀಡಿದೆ.


ನ್ಯಾಯಮೂರ್ತಿಗಳಾದ ರವಿ ಮಳಿಮಠ ಮತ್ತು ಹೆಚ್ ಪಿ ಸಂದೇಶ್ ಅವರನ್ನೊಳಗೊಂಡ ವಿಭಾಗೀಯ ಪೀಠ ಆದೇಶ ನೀಡಿ, ಪರಿಹಾರವು ಅಪರಾಧದ ಗಂಭೀರತೆ ಮತ್ತು ಅದರಿಂದಾದ ಪರಿಣಾಮಗಳಿಗೆ ತಕ್ಕಂತೆ ಇರಬೇಕು. ಶಿಕ್ಷೆ ವಿಧಿಸುವಾಗ ಕ್ರಿಮಿನಲ್ ಗಳ ಹಕ್ಕುಗಳನ್ನು ನೋಡುವುದು ಮಾತ್ರವಲ್ಲದೆ ತೊಂದರೆಗೆ ಒಳಗಾದವರ ಮತ್ತು ಸಮಾಜದ ಹಕ್ಕುಗಳನ್ನು ಸಹ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದೆ. 


ಇದರಿಂದಾಗಿ ವಿಚಾರಣಾಧೀನ ನ್ಯಾಯಾಲಯಗಳು ಇಂತಹ ಪ್ರಕರಣಗಳಲ್ಲಿ ಆದೇಶ ನೀಡುವಾಗ ಅಪರಾಧದ ಗಂಭೀರತೆ ಮತ್ತು ತೀವ್ರತೆ, ಗಾಯದ ಸ್ವರೂಪ ಮತ್ತು ಚಿಕಿತ್ಸೆಗೆ ತಗುಲಿದ ವೆಚ್ಚವನ್ನು ನೋಡಿಕೊಂಡು ಆದೇಶ ಹೊರಡಿಸಬೇಕೆಂದು ಹೇಳಿದೆ.


ಮಂಗಳೂರಿನ ಹೊಸಬೆಟ್ಟಿನ ಕೆಂಪಾಜೆ ಪೇಪರ್ ಮಿಲ್ಸ್ ನಲ್ಲಿ ಇರುವ ವಿಶ್ವನಾಥ ದೇವಾಡಿಗ ಮತ್ತು ಭವಾನಿ ದೇವಾಡಿಗ ಅವರ ಕೇಸಿಗೆ ಸಂಬಂಧಿಸಿದಂತೆ 2013ರಲ್ಲಿ ಮೇಲ್ಮನವಿ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಬದಿಗೊತ್ತಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದ ಸಂದರ್ಭದಲ್ಲಿ ಹೈಕೋರ್ಟ್ ಹೀಗೆ ಹೇಳಿದೆ.

SCROLL FOR NEXT