ರಾಜ್ಯ

'ಲಗೇಜ್' ಗೊಂದಲಕ್ಕೆ ಬ್ರೇಕ್ ಹಾಕಲು 'ಸ್ಟಿಕರ್ಸ್' ಪರಿಚಯಿಸಿದ ನಮ್ಮ ಮೆಟ್ರೋ!

Manjula VN

ಬೆಂಗಳೂರು: ಲಗೇಜ್ ಒಯ್ಯುವುದರ ಕುರಿತಂತೆ ಇದ್ದ ಸಾಕಷ್ಟು ಗೊಂದಲಗಳಿಗೆ ಬ್ರೇಕ್ ಹಾಕಿರುವ ನಮ್ಮ ಮೆಟ್ರೋ ಇದೀಗ ಬ್ಯಾಗ್ ಗಳ ಮೇಲೆ ಅಂಟಿಸಲು ಸ್ಟಿಕರ್ಸ್ ಗಳನ್ನು ಪರಿಚಯಿಸಿದೆ. 

ಮೆಟ್ರೋಯದಲ್ಲಿ ತೆಗೆದುಕೊಂಡು ಹೋಗುವ ಬ್ಯಾಗ್ ಗಳು 15 ಕೆಜಿಗಿಂತಲೂ ಹೆಚ್ಚಾಗಿದ್ದರೆ ರೂ. 30 ನೀಡಿ ಟಿಕೆಟ್ ಪಡೆದು ಪ್ರಯಾಣ ಬೆಳೆಸುವ ನಿಯಮವನ್ನು ನಮ್ಮ ಮೆಟ್ರೋ 2011ರ ಅಕ್ಟೋಬರ್ ತಿಂಗಳಿನಲ್ಲಿಯೇ ತಂದಿತ್ತು. ಆದರೆ, ಈ ನಿಯಮ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿರಲಿಲ್ಲ.
 
ನಮ್ಮ ಮೆಟ್ರೋ ನಿಲ್ದಾಣಕ್ಕೆ ಲಗೇಜ್ ಗಳನ್ನು ಹೊತ್ತು ಹೋಗಬೇಕಾದರೆ, ಭದ್ರತಾ ಸಿಬ್ಬಂದಿಗಳು ಬ್ಯಾಗ್ ಗಳನ್ನು ಪರೀಕ್ಷಿಸುತ್ತಾರೆ. ಈ ವೇಳೆ ಕೈಯಲ್ಲಿ ಬ್ಯಾಗ್ ಗಳನ್ನು ಹಿಡಿದು ಅಂದಾಜಿನ ಮೇಲೆ ತೂಕವನ್ನು ಅಳೆಯುತ್ತಿದ್ದರು. ಇದಕ್ಕೆ ಪ್ರಯಾಣಿಕರು ಆಕ್ರೋಶಗಳನ್ನು ವ್ಯಕ್ತಪಡಿಸುತ್ತಿದ್ದರು. ಲಗೇಜ್ ಗಳಿಗೆ ಎಲ್ಲಿ ಟಿಕೆಟ್ ಪಡೆಯಬೇಕು, ಹೇಗೆ ಪಡೆದುಕೊಳ್ಳಬೇಕೆಂಬುದರ ಕುರಿತು ಪ್ರಯಾಣಿಕರಲ್ಲೂ ಸಾಕಷ್ಟು ಗೊಂದಲಗಳಿದ್ದವು. ಇದೀಗ ಆ ಗೊಂದಲಗಳಿಗೆ ನಮ್ಮ ಮೆಟ್ರೋ ತೆರೆ ಎಳೆದಿದ್ದು, ಇನ್ನು ಮುಂದೆ ಮೆಟ್ರೋ ನಿಲ್ದಾಣಕ್ಕೆ ತೆರಳಿದ ವೇಳೆ ಬ್ಯಾಗ್ ಗಳನ್ನು ಪರಿಶೀಲಿಸುವ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರೇ ಬ್ಯಾಗ್ ಗಳ ಮೇಲೆ ಸ್ಟಿಕರ್ ಗಳನ್ನು ಅಂಟಿಸುತ್ತಾರೆ. 

ಸ್ಟಿಕರ್ ಗಳನ್ನು ಅಂಟಿಸಿದ ಬಳಿಕ ಬ್ಯಾಗ್ ಗಳ ತೂಕದ ಆಧಾರದ ಮೇಲೆ ಕೌಂಟರ್ ಗಳಲ್ಲಿ ಟಿಕೆಟ್ ಗಳನ್ನು ಪಡೆದುಕೊಳ್ಳಬಹುದಾಗಿದೆ. 

ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ನಿರ್ಧರಿಸಿರುವ ಮೆಟ್ರೋ ಅಧಿಕಾರಿಗಳು ಆಗಸ್ಟ್ ತಿಂಗಳಿನಿಂದಲೇ ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಬ್ಯಾಗ್ ಗಳ ಮೇಲೆ ಸ್ಟಿಕರ್ ಗಳನ್ನು ಅಂಟಿಸುತ್ತಿದ್ದಾರೆ. 

ಈ ವರೆಗೂ 40 ಮೆಟ್ರೋ ನಿಲ್ದಾಣಗಳಲ್ಲಿ ಒಟ್ಟು 9,816 ಬ್ಯಾಗ್ ಗಳ ಮೇಲೆ ಸ್ಟಿಕರ್ ಗಳನ್ನು ಅಂಟಿಸಲಾಗಿದ್ದು, ಕಳೆದ ನಾಲ್ಕು ತಿಂಗಳಿಗೆ ಹೋಲಿಕೆ ಮಾಡಿದರೆ, ಆಗಸ್ಟ್ ತಿಂಗಳಿನಲ್ಲಿ ಬ್ಯಾಗ್ ಗಳಿಂದಲೇ ಹೆಚ್ಚು ಆದಾಯ ನಮ್ಮ ಮೆಟ್ರೋಗೆ ಬಂದಿದೆ. 

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮೆಟ್ರೋ ರೈಲಿ ನಿಗಮದ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಎ.ಎಸ್.ಶಂಕರ್, ನಿಯಮವಿದ್ದರೂ ಅದು ಕಟ್ಟು ನಿಟ್ಟಾಗಿ ಪಾಲನೆಯಾಗುತ್ತಿರಲಿಲ್ಲ. ಆಗಸ್ಟ್ ಮೊದಲ ವಾರದಿಂದಲೇ ನಾವು ಲಗೇಜ್ ಟಿಕೆಟ್ ಗಳನ್ನು ಪರಿಚಯಿಸಿದೆವು. ಪ್ರತೀ ಸ್ಟಿಕರ್ ಬೆಲೆ ರೂ.30 ಆಗಿದ್ದು, ಲಗೇಜ್ ಜೊತೆಗೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಈ ಟಿಕೆಟ್ ಗಳನ್ನು ಖರೀದಿ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. 

ಪ್ರಸಕ್ತ ಸಾಲು ಏಪ್ರಿಲ್ ನಲ್ಲಿ 4,829 ಬ್ಯಾಗ್ ಗಳಿಂದ ರೂ.1,44,870 ಆದಾಯ ಬಂದಿತ್ತು ಇದಕ್ಕೆ ಹೋಲಿಕೆ ಮಾಡಿದರೆ, ಆಗಸ್ಟ್ ತಿಂಗಳಿನಲ್ಲಿ ರೂ.2,94,480 ಆದಾಯ ಬಂದಿದೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ ಬ್ಯಾಗ್ ತೂಕ ಪರಿಶೀಲಿಸಲು ಯಂತ್ರಗಳನ್ನು ಬಳಕೆ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಎಂದಿನಂತೆ ಸಾಮಾನ್ಯವಾಗಿಯೇ ಭದ್ರತಾ ಸಿಬ್ಬಂದಿಗಳೇ ಬ್ಯಾಗ್ ಗಳನ್ನು ಪರಿಶೀಲಿಸುವ ವೇಳೆ ತೂಕವನ್ನು ಅಂದಾಜಿನ ಮೇಲೆ ಲೆಕ್ಕ ಹಾಗುತ್ತಾರೆ. ಬ್ಯಾಗ್ ಗಳು ಹೆಚ್ಚು ತೂಕ ಎನಿಸಿದಾಗ ಟಿಕೆಟ್ ಪಡೆಯಬೇಕಾಗುತ್ತದ ಎಂದಿದ್ದಾರೆ. 

SCROLL FOR NEXT