ರಾಜ್ಯ

ವಿಧಾನಸೌಧ ಪ್ರವೇಶಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಪ್ರಸ್ತಾವ ಇಲ್ಲ- ಮುಖ್ಯಮಂತ್ರಿಗಳ ಕಾರ್ಯಾಲಯ

Nagaraja AB

ಬೆಂಗಳೂರು: ವಿಧಾನಸೌಧ ಪ್ರವೇಶಕ್ಕೆ  ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯ ತಿಳಿಸಿದೆ. 

ರಾಜ್ಯ ಸಚಿವಾಲಯ ಪ್ರವೇಶಕ್ಕೆ  ಕೇವಲ 150 ಪತ್ರಕರ್ತರಿಗೆ ಮಾತ್ರ  ಪಾಸ್ ನೀಡಲು ಸಿಬ್ಬಂದಿ ಮತ್ತು ಆಡಳಿತ ಸೇವೆ ಇಲಾಖೆ ಪ್ರಸ್ತಾಪಿಸಿತು.ಈ ಯೋಜನೆ ಭಾಗವಾಗಿ ವಾರ್ತಾ ಇಲಾಖೆ ಶಿಫಾರಸ್ಸಿನ ಮೇರೆಗೆ  ವಿಧಾನಸೌಧಕ್ಕೆ ಪ್ರತಿದಿನ ಬರುತ್ತಿದ್ದ  150 ಪತ್ರಕರ್ತರಿಗೆ ಹಳದಿ ಪಾಸ್ ಗಳನ್ನ ನೀಡಲು ಯೋಚಿಸಲಾಗಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ.

ಕಾಂಗ್ರೆಸ್ - ಜೆಡಿಎಸ್  ಮೈತ್ರಿ ಸರ್ಕಾರದ ಅವಧಿಯಲ್ಲಿ ವಿಧಾನಸೌಧ ಮತ್ತು ಸಚಿವರುಗಳ ಕಚೇರಿಗೆ ಪತ್ರಕರ್ತರ ಪ್ರವೇಶ ತಡೆಗಟ್ಟುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿತ್ತು. ಆದಾಗ್ಯೂ, ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಯೋಜನೆಯನ್ನು ರದ್ದುಗೊಳಿಸಲಾಗಿತ್ತು. 

ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ  ವಿಧಿಸುವ ಬಿಜೆಪಿ ಸರ್ಕಾರದ ನಡೆಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಶನಿವಾರ ತೀವ್ರವಾಗಿ ಟೀಕಿಸಿದ್ದರು. 

ಆದರೆ, ವಿಧಾನಸೌಧಕ್ಕೆ ಮಾಧ್ಯಮಗಳ ನಿರ್ಬಂಧ ಪ್ರಸ್ತಾವ  ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧ ಡಿಪಿಎಆರ್ ಅಥವಾ ಇನ್ನಿತರ ಯಾವುದೇ ಇಲಾಖೆಯಿಂದ ಪ್ರಸ್ತಾವ ಬಂದರೂ ಸ್ವೀಕರಿಸುವುದಿಲ್ಲ, ಪತ್ರಕರ್ತರಿಗೆ ಪ್ರವೇಶವನ್ನು ನಿರ್ಬಂಧಿಸುವುದಿಲ್ಲ ಎಂದು ಮುಖ್ಯಮಂತ್ರಿ ಕಾರ್ಯಾಲಯದ ಮೂಲಗಳಿಂದ ತಿಳಿದುಬಂದಿದೆ. 
 

SCROLL FOR NEXT