ರಾಜ್ಯ

ವಾಹನದ ಟೈರ್ ಬೋಳಾಗಿದ್ದರೂ ದಂಡ, ಬೆಂಗಳೂರು ಪೊಲೀಸರು ಸಂಗ್ರಹಿಸಿದ ದಂಡ ಬರೊಬ್ಬರಿ...!

Srinivasamurthy VN

ಐದು ದಿನಗಳಲ್ಲಿ 6, 813 ಸಂಚಾರಿ ನಿಯಮ ಉಲ್ಲಂಘನೆ, ಸಂಗ್ರಹವಾಗಿದ್ದ ಬರೊಬ್ಬರಿ 72 ಲಕ್ಷ ರೂ.

ಬೆಂಗಳೂರು: ನೂತನ ಸಂಚಾರಿ ನಿಯಮಗಳು ಜಾರಿಯಾದ ಬಳಿಕ ನಗರ ಪ್ರದೇಶಗಳಲ್ಲಿ ಸಂಚಾರಿ ನಿಯಮ ಉಲ್ಲಂಘನೆಗೆ ವಿಧಿಸಿದ ದಂಡಗಳ ಒಟ್ಟಾರೆ ಮೊತ್ತವನ್ನು ಕೇಳಿದರೆ ಹುಬ್ಬೇರಿಸುತ್ತೀರಿ.

ಹೌದು.. ನೂತನ ಸಂಚಾರಿ ನಿಯಮಗಳು ಜಾರಿಯಾದ ಬಳಿಕ ರಾಜಧಾನಿ ಬೆಂಗಳೂರಿನಲ್ಲಿ ಬರೊಬ್ಬರಿ 6,813 ಸಂಚಾರಿ ನಿಯಮ ಉಲ್ಲಂಘನೆ ದಾಖಲಾಗಿದ್ದು, ಇವುಗಳಿಂದ ಬರೊಬ್ಬರಿ 72 ಲಕ್ಷಕ್ಕೂ ಅಧಿಕ ಮೊತ್ತದ ದಂಡ ಹಣ ಸಂಗ್ರಹವಾಗಿದೆ ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ.

ಈ ಕುರಿತಂತೆ ಬೆಂಗಳೂರು ಸಂಚಾರಿ ಪೊಲೀಸರು ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸೆಪ್ಟೆಂಬರ್ 4ರ ರಾತ್ರಿ 9 ರಿಂದ ಸೆಪ್ಟೆಂಬರ್ 9ರ ರಾತ್ರಿ 9 ಗಂಟೆಯವರೆಗೂ ಸಂಗ್ರಹವಾದ ದಂಡದ ಮೊತ್ತದ ವಿವರಣೆಯನ್ನು ನೀಡಿದ್ದಾರೆ. ಈ ಪೈಕಿ ಹಿಂಬದಿ ಸವಾರ ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸಿದ ಪ್ರಕರಣಗಳಿಂದ ಅತೀ ಹೆಚ್ಚಿನ ಮೊತ್ತದ ದಂಡ ಸಂಗ್ರಹವಾಗಿದ್ದು, ನಗರದಲ್ಲಿ ಕಳೆದ ಐದು ದಿನಗಳ ಅಂತರದಲ್ಲಿ ಒಟ್ಟು 2645 ಹಿಂಬದಿ ಸವಾರ ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾವಣೆ ಪ್ರಕರಣಗಳು ದಾಖಲಾಗಿದ್ದು, ಇದರಿಂದ ಬರೊಬ್ಬರಿ 26, 45, 000 ರೂ ದಂಡ ಸಂಗ್ರಹವಾಗಿದೆ. ಅಂತೆಯೇ 1968 ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸಿದ (ಸವಾರ) ಪ್ರಕರಣಗಳು ದಾಖಲಾಗಿದ್ದು, ಇದರಿಂದ ಬರೊಬ್ಬರಿ 19, 68, 000 ರೂ ದಂಡವನ್ನು ಸಂಗ್ರಹಿಸಲಾಗಿದೆ.

ಅಂತೆಯೇ 425 ಓನ್ ವೇಯಲ್ಲಿ ಸಂಚಾರ ಮಾಡಿದ ಪ್ರಕರಣಗಳು ದಾಖಲಾಗಿದ್ದು, ಇದರಿಂದ 2, 12, 500 ರೂ ಸಂಗ್ರಹವಾಗಿದ್ದು, ಉಳಿದಂತೆ ಚಾಲನೆ ವೇಳೆ ಮೊಬೈಲ್ ಬಳಕೆ (695 ಪ್ರಕರಣ)ಯಿಂದ 13, 90, 000 ರೂ, ದಾಖಲೆ ರಹಿತ ವಾಹನ ಚಾಲನೆ (66 ಪ್ರಕರಣ)ಯಿಂದ 64 ಸಾವಿರ ರೂ ದಂಜ ಸಂಗ್ರಹವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇನ್ನು ಅಪರೂಪದ ಪ್ರಕರಣ ಎಂಬಂತೆ ವಾಹನದ ಟೈರ್ ಸವೆದು ಬೋಳಾಗಿದ್ದಕ್ಕೂ ಪೊಲೀಸರು ದಂಡ ವಿಧಿಸಿದ್ದು, 500 ದಂಡ ವಸೂಲಿ ಮಾಡಿದ್ದಾರೆ.

SCROLL FOR NEXT