ಸಿಎಂ ಯಡಿಯೂರಪ್ಪ 
ರಾಜ್ಯ

ಲಿಖಿತ ಒಪ್ಪಿಗೆ ನೀಡಿದರೆ ನವಗ್ರಾಮ ನಿರ್ಮಾಣ: ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ

ಸ್ಥಳಾಂತರಕ್ಕೆ ಸಿದ್ಧವಿರುವುದಾಗಿ ನದಿತೀರದ ಗ್ರಾಮಸ್ಥರು ಲಿಖಿತವಾಗಿ ತಿಳಿಸಿದರೆ ಇಡೀ ಗ್ರಾಮವನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಿ ನವಗ್ರಾಮಗಳನ್ನು ನಿರ್ಮಿಸಿ, ಅಲ್ಲಿ ಶಾಲೆ, ಆಸ್ಪತ್ರೆ ಸೇರಿ ಎಲ್ಲ ಬಗೆಯ ಮೂಲಸೌಕರ್ಯ....

ಬೆಳಗಾವಿ: ಸ್ಥಳಾಂತರಕ್ಕೆ ಸಿದ್ಧವಿರುವುದಾಗಿ ನದಿತೀರದ ಗ್ರಾಮಸ್ಥರು ಲಿಖಿತವಾಗಿ ತಿಳಿಸಿದರೆ ಇಡೀ ಗ್ರಾಮವನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಿ ನವಗ್ರಾಮಗಳನ್ನು ನಿರ್ಮಿಸಿ, ಅಲ್ಲಿ ಶಾಲೆ, ಆಸ್ಪತ್ರೆ ಸೇರಿ ಎಲ್ಲ ಬಗೆಯ ಮೂಲಸೌಕರ್ಯ ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಹಂಪಿಹೊಳಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ ಸುರೇಬಾನ ಗ್ರಾಮದ ಪರಿಹಾರ ಕೇಂದ್ರದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರವಾಹ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದರು.

ಪ್ರವಾಹದಿಂದ ಸಂಪೂರ್ಣ ಮನೆಗಳನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಹೊಸ ಮನೆ ನಿರ್ಮಾಣಕ್ಕೆ ಅಡಿಪಾಯ ಹಾಕಲು ಒಂದು ವಾರದೊಳಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಪ್ರತಿಯೊಂದು ಮನೆ ನಿರ್ಮಾಣಕ್ಕೆ ಒಟ್ಟಾರೆ ಐದು ಲಕ್ಷ ರೂಪಾಯಿ ನೀಡಲು ಸರ್ಕಾರ ನಿರ್ಧರಿಸಿದ್ದು, ಮೊದಲ ಕಂತಿನಲ್ಲಿ ಅಡಿಪಾಯಕ್ಕೆ ನೀಡುವ ಒಂದು ಲಕ್ಷ ರೂಪಾಯಿ ಬಳಸಿಕೊಂಡು ಕೆಲಸ ಆರಂಭಿಸುವಂತೆ ಸಲಹೆ ಮಾಡಿದರು. 

ಅಡಿಪಾಯ ಹಾಕಲು ಮುಂದಾಗುವ ಕುಟುಂಬಗಳಿಗೆ ವಾರದೊಳಗೆ ಒಂದು ಲಕ್ಷ ರೂಪಾಯಿ ಮೊದಲ ಕಂತು ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಅವರು, ಅದೇ ರೀತಿ ಮನೆಗಳ ದುರಸ್ತಿಗೆ ಒಂದು ಲಕ್ಷ ರೂಪಾಯಿ ನೆರವು ನೀಡಲಾಗುವುದು. ಸಂತ್ರಸ್ತರಿಗೆ ಅಗತ್ಯವಾಗಿರುವ ತಾತ್ಕಾಲಿಕ ಶೆಡ್ ನಿರ್ಮಾಣ ಕಾಮಗಾರಿಯನ್ನು ಮೂರ್ನಾಲ್ಕು ದಿನಗಳಲ್ಲಿ ಆರಂಭಿಸುವಂತೆಯೂ ನಿರ್ದೇಶನ ನೀಡಿದರು. 

ಪ್ರವಾಹದಿಂದ ಹಾನಿಗೊಳಗಾದ ಅಂಗಡಿ ಮುಂಗಟ್ಟುಗಳ ಮಾಲೀಕರಿಗೆ ಕೂಡ ತಲಾ ಹತ್ತು ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು, ಬೆಳೆನಾಶಕ್ಕೆ ಸೂಕ್ತ ಪರಿಹಾರ ನೀಡಲು ಕೇಂದ್ರದ ನೆರವು ನಿರೀಕ್ಷಿಸಲಾಗುತ್ತಿದೆ. ನೆರೆಯಿಂದ ಸಂಕಷ್ಟಕ್ಕೀಡಾಗಿರುವ ನೇಕಾರರ ಕುಟುಂಬಗಳಿಗೂ ಸೂಕ್ತ ಪರಿಹಾರ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ರಾಮದುರ್ಗ ತಾಲ್ಲೂಕಿನ ಸುರೇಬಾನ ಗ್ರಾಮದಲ್ಲಿ ಆರಂಭಿಸಲಾಗಿರುವ ಪರಿಹಾರ ಕೇಂದ್ರದಲ್ಲಿ ಅನಾರೋಗ್ಯದಿಂದ ಮೃತಪಟ್ಟಿರುವ ದೊಡ್ಡ ಹಂಪಿಹೊಳಿ ಗ್ರಾಮದ ನಾಲ್ಕು ವರ್ಷದ ಬಾಲಕ ಅಬ್ದುಲ್‌ಸಾಬ್ ಮುಲ್ಲಾನವರ ಅವರ ಕುಟುಂಬಕ್ಕೆ ಯಡಿಯೂರಪ್ಪ ಅವರು ಐದು ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿದರು. ಜೊತೆಗೆ ಪ್ರವಾಹ ಸಂದರ್ಭದಲ್ಲಿ ನಾಪತ್ತೆಯಾಗಿರುವ ವ್ಯಕ್ತಿಯೊಬ್ಬರು ಇದುವರೆಗೆ ಪತ್ತೆಯಾಗದಿರುವುದರಿಂದ ಅವರ ಕುಟುಂಬಕ್ಕೂ ಐದು ಲಕ್ಷ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಮಲಪ್ರಭಾ ನದಿ ದಂಡೆಯ ತಡೆಗೋಡೆ ಒಡೆದ ಪರಿಣಾಮ ಹಂಪಿಹೊಳಿ ಗ್ರಾಮಕ್ಕೆ ನೀರು ನುಗ್ಗುತ್ತಿರುವುದರಿಂದ ತಡೆಗೋಡೆ ನಿರ್ಮಾಣಕ್ಕೆ ಕೂಡಲೇ ಅಂದಾಜು ಪಟ್ಟಿಯನ್ನು ತಯಾರಿಸಿ ಸಲ್ಲಿಸುವಂತೆ ನೀರಾವರಿ ಇಲಾಖೆ ಹಾಗು ಜಿಲ್ಲಾಧಿಕಾರಿಗಳಿಗೆ ಆದೇಶಿಸಿದರು. ಗ್ರಾಮಸ್ಥರು ಹಾಗೂ ಸ್ಥಳೀಯ ಶಾಸಕರ ಒತ್ತಾಯಕ್ಕೆ ಸ್ಪಂದಿಸಿದ ಅವರು, ತಡೆಗೋಡೆ ನಿರ್ಮಿಸಲು ತಕ್ಷಣ ಹಣ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೂ ಮುಂಚೆ ಮಾತನಾಡಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಸಂತ್ರಸ್ತರಿಗೆ ಸಾಂತ್ವನ ಹೇಳುವ ಜತೆಗೆ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸಂತ್ರಸ್ತರ ಮನೆಬಾಗಿಲಿಗೆ ಮುಖ್ಯಮಂತ್ರಿಗಳು ಬಂದಿದ್ದಾರೆ. ಮನೆಗಳ ಹಾನಿ, ಮಗ್ಗಗಳ ನಷ್ಟ ಮತ್ತು ಬೆಳೆಹಾನಿಗೆ ಸೂಕ್ತ ಪರಿಹಾರ ಒದಗಿಸುವ ಜತೆಗೆ ಶಾಶ್ವತ ಪರಿಹಾರಕ್ಕೆ ಸರ್ಕಾರ ಬದ್ಧವಾಗಿದೆ. ಪ್ರವಾಹದಿಂದ ಉಂಟಾಗಿರುವ ಹಾನಿಯ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಸಂಪೂರ್ಣ ಮಾಹಿತಿಯಿದೆ ಎಂದರು.

ರಾಮದುರ್ಗ ತಾಲ್ಲೂಕಿನ 29 ಗ್ರಾಮಗಳು ಹಾಗೂ 9 ವಾರ್ಡ್ ಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡುವಂತೆ ಮನವಿ ಮಾಡಿದರು. ಹಂಪಿಹೊಳೆ ಸಮೀಪ ಸೇತುವೆ ನಿರ್ಮಿಸಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ. ಆದ್ದರಿಂದ ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಎಂದರು.
ಇದಕ್ಕೂ ಮುನ್ನ ದೊಡ್ಡ ಹಂಪಿಹೊಳಿ ಗ್ರಾಮದಲ್ಲಿ ಯಡಿಯೂರಪ್ಪ ಪ್ರವಾಹದಿಂದ ಉಂಟಾಗಿರುವ ಹಾನಿ ಪರಿಶೀಲಿಸಿದರು. ತಡೆಗೋಡೆ ಒಡೆದಿದ್ದು, ಮಲಪ್ರಭಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ಬಿಟ್ಟ ನೀರು ನೇರವಾಗಿ ಗ್ರಾಮಕ್ಕೆ ನುಗ್ಗಿ ತೀವ್ರ ಹಾನಿಯಾಗಿದೆ ಎಂದು ಗ್ರಾಮಸ್ಥರು ಮುಖ್ಯಮಂತ್ರಿಗಳಿಗೆ ಮನದಟ್ಟು ಮಾಡಿದರು.

ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಸಂಪೂರ್ಣ ಮುಳುಗಡೆಯಾಗಿರುವ ದೊಡ್ಡ ಹಂಪಿಹೊಳಿ ಹಾಗೂ ಚಿಕ್ಕ ಹಂಪಿಹೊಳಿ ಗ್ರಾಮಗಳ ಸ್ಥಳಾಂತರ ಮತ್ತು ತಡೆಗೋಡೆ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಹೊಸ ಒಡ್ಡು ನಿರ್ಮಾಣ ಸೇರಿದಂತೆ ಸೂಕ್ತ ಜಮೀನು ಗುರುತಿಸಿಕೊಟ್ಟರೆ ಶಾಶ್ವತ ಸ್ಥಳಾಂತರ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಸ್ಥಳದಲ್ಲಿಯೇ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಮುಖ್ಯಮಂತ್ರಿಗಳು, ಸ್ವಲ್ಪ ಸಮಯಾವಕಾಶ ನೀಡಿದರೆ ಎಲ್ಲ ಬಗೆಯ ನೆರವು ಒದಗಿಸಲು ಸರ್ಕಾರ ಸಿದ್ಧವಿದೆ ಎಂದರು. ಸುನ್ನಾಳ ಗ್ರಾಮಕ್ಕೆ ತಕ್ಷಣ ಎರಡೂವರೆ ಕಿ.ಮೀ. ರಸ್ತೆ ನಿರ್ಮಿಸಿಕೊಡುವಂತೆ ಇದೇ ವೇಳೆ ಜಿಲ್ಲಾಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT