ರಾಜ್ಯ

ಮಹದಾಯಿ ವಿವಾದ: ಗೋವಾ ಮುಖ್ಯಮಂತ್ರಿ ಭೇಟಿಗೆ ಕ್ರಮ- ಸಿಎಂ ಬಿಎಸ್ ಯಡಿಯೂರಪ್ಪ

Srinivasamurthy VN

ಬೆಂಗಳೂರು: ಕರ್ನಾಟಕ, ಗೋವಾ ನಡುವೆ ತೀವ್ರ ವಿವಾದಕ್ಕೆ ಕಾರಣವಾಗಿರುವ ಮಹದಾಯಿ ನದಿ ನೀರು ಹಂಚಿಕೆ ಸಮಸ್ಯೆ ಬಗೆಹರಿಸಲು ಸರ್ಕಾರ ಕಾರ್ಯೋನ್ಮುಖವಾಗಿದ್ದು, ಈ ಸಂಬಂಧ ಚರ್ಚಿಸಲು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಸಮಯ ಕೇಳಲಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ನವದೆಹಲಿಗೆ ತೆರಳಬೇಕಿದ್ದ ಯಡಿಯೂರಪ್ಪ ತಮ್ಮ ಪ್ರವಾಸವನ್ನು ಕೈಬಿಟ್ಟು ಬೆಳಗಾವಿಯಲ್ಲಿ ನೆರೆಪರಿಸ್ಥಿತಿ ಪರಿಶೀಲನೆಗೆ ತೆರಳಿದ ಅವರು, ಅಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಹಾದಾಯಿ ವಿವಾದ ಬಗೆಹರಿಸುವ ಸಂಬಂಧ ಮೂರು ರಾಜ್ಯಗಳ ಸಭೆ ನಡೆಸಲಾಗುತ್ತಿದ್ದು, ಈ ಸಂಬಂಧ ಈಗಾಗಲೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿ ಸಮಾಲೋಚಿಸಲಾಗಿದೆ. 

ಗೋವಾ ಮುಖ್ಯಮಂತ್ರಿ ಅವರಿಗೆ ಸಮಯ ನಿಗದಿಪಡಿಸುವಂತೆ ಹೇಳಲಾಗಿದೆ. ಸೆ 16 ಅಥವಾ 17 ರಂದು ಗೋವಾಕ್ಕೆ ಭೇಟಿ ನೀಡುತ್ತಿದ್ದು, ಆದಷ್ಟು ಬೇಗ ಮಹಾದಾಯಿ ವಿವಾದ ಬಗೆಹರಿಯಲಿದೆ ಎಂದು ಆಶ‍್ವಾಸನೆ ನೀಡಿದರು. ಪ್ರವಾಹ ಪರಿಹಾರ ಕಾರ್ಯದಲ್ಲಿ ನಿರತವಾಗಿದ್ದ ಸಂದರ್ಭದಲ್ಲಿ ಅಪಘಾತದಿಂದ ಸಾವಿಗೀಡಾದ ಪಿಎಸ್‍ಐ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದರು.

ಬೆಳಗಾವಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸಂತ್ರಸ್ತರಾಗಿರುವ ಒಂದು ಲಕ್ಷ ಹತ್ತು ಸಾವಿರ ಜನರಿಗೆ 10 ಸಾವಿರ ರೂಪಾಯಿ ಪರಿಹಾರ ನೀಡುವ ಕೆಲಸ ಮುಗಿದಿದೆ. ಮನೆ ಕಳೆದುಕೊಂಡವರಿಗೆ ಮನೆ ನಿರ್ಮಾಣ ಮಾಡಲು ತಕ್ಷಣವೇ ಒಂದು ಲಕ್ಷ ರೂಪಾಯಿ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು. ಹೊಸದಿಲ್ಲಿ ಪ್ರವಾಹ ರದ್ದು ಮಾಡಿ ನಿರಾಶ್ರಿತರ ಸಮಸ್ಯೆ ಆಲಿಸಲು ಬಂದಿದ್ದೇನೆ. ಉಳಿದೆಲ್ಲ ಅಭಿವೃದ್ಧಿ ಕಾರ್ಯಗಳಿಗಿಂತ ಸಂತ್ರಸ್ತರ ಸಮಸ್ಯೆ ಬಗೆಹರಿಸುವುದು ಮೊದಲ ಆದ್ಯತೆಯಾಗಿದೆ ಎಂದರು.

ಇದಕ್ಕೂ ಮುನ್ನ ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಮಾತನಾಡಿದ ಯಡಿಯೂರಪ್ಪ, ರಾಮದುರ್ಗದ ಸುರೇಬಾನ ಕಾಳಜಿಕೇಂದ್ರದಲ್ಲಿ ಮೃತಪಟ್ಟ ಬಾಲಕನ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ಘೋಷಿಸಿದರು. ಬಾಲಕನ ಸಾವಿಗೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

SCROLL FOR NEXT