ರಾಜ್ಯ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; ಆರೋಪಿ ಕುಮಾರಸ್ವಾಮಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

Raghavendra Adiga

ಬೆಂಗಳೂರು:  ದ್ವಿತೀಯ ಪಿ.ಯು ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಮೊದಲ ಆರೋಪಿ ಕುಮಾರಸ್ವಾಮಿಗೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ.

ಪ್ರಕರಣದ ಆರೋಪಿ ಕುಮಾರಸ್ವಾಮಿ ಅಲಿಯಾಸ್ ಕುಮಾರ್ ಅಲಿಯಾಸ್ ಕಿರಣ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎ.ಪಾಟೀಲ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ.

ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ, ಪ್ರಕರಣದ ಪ್ರಮುಖ ಆರೋಪಿಗಳಿಗೆ ಈಗಾಗಲೇ ಜಾಮೀನು ದೊರೆತಿದೆ. ಈ ಹಂತದಲ್ಲಿ ಈತನಿಗೆ ಜಾಮೀನು ನೀಡಲಾಗದು. ಇಂತಹ ಆರೋಪಿಗಳು ಹೊರಬಂದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ನಾಶಮಾಡುವ ಸಾಧ್ಯತೆಯಿದೆ. ಶಿಕ್ಷಣ ಕ್ಷೇತ್ರದ ಹಿತಾಸಕ್ತಿಯಿಂದ ಇಂತಹ ಆರೋಪಿಗಳು ಜೈಲಿನಲ್ಲಿಯೇ ಇರುವುದು ಸೂಕ್ತ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. 

ಹಿನ್ನೆಲೆ 

ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಎರಡನೇ ಕಿಂಗ್ ಪಿನ್ ಕುಮಾರಸ್ವಾಮಿ ಆಗಿದ್ದು ಈತನನ್ನು 2016 ಮೇ ಹತ್ತರಂದು ಬಂಧಿಸಲಾಗಿತ್ತು. ಈತ ಹಗರಣದ ಪ್ರಮುಖ ಆರೋಪಿ ಶಿವಕುಮಾರಸ್ವಾಮಿ ಅಲಿಯಾಸ್ ಗೂರೂಜಿ ಅಣ್ಣನ ಮಗನಾಗಿದ್ದ. ಮಕೂರಿನಲ್ಲಿ ಸ್ನೇಹಿತರ ಆಶ್ರಯದಲ್ಲಿದ್ದ ಈತನನ್ನು ಸಿಐಡಿ ಪೋಲೀಸರು ಮಿಂಚಿನ ಕಾರ್ಯಾಚರಣೆ  ನಡೆಸಿ ಬಂಧಿಸಿದ್ದರು.ಸುಮಾರು ಹತ್ತಕ್ಕೂ ಹೆಚ್ಚು ಜನರನ್ನು ಒಳಗೊಂಡಿದ್ದ ಈ ಗ್ಯಾಂಗ್ 2016 ಮಾ. 21 ಹಾಗೂ ಮಾ. 31ರಂದು ಎರಡು ಬಾರಿ ಪಿಯುಸಿ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿತ್ತು. ಇದಕ್ಕೆ 'ಟೊಮ್ಯಾಟೊ ಬಿಸಿನೆಸ್' ಎಂದು ಕೋಡ್ ವರ್ಡಾಗಿತ್ತು.

ಟೈಮ್ ಲೈನ್

ಮಾ.21 2016 ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ, ನಡೆದಿದ್ದ ಪರೀಕ್ಷೆ ರದ್ದು
ಮಾ.31 2016 ಮರು ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ, ನಡೆಯಬೇಕಿದ್ದ ಪರೀಕ್ಷೆ ರದ್ದು
 ಏ.4 2016 ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ, ವೈದ್ಯ ಶಿಕ್ಷಣ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಓಬಳರಾಜು ಹಾಗೂ ಪಿಡಿಬ್ಲ್ಯೂಡಿ ಮ್ಯಾನೇಜರ್‌ ರುದ್ರಪ್ಪ ಬಂಧನ
ಏ.6 2016 ದೈಹಿಕ ಶಿಕ್ಷಣ ಶಿಕ್ಷಕ ಅನಿಲ್‌, ಸತೀಶ ಬಂಧನ
ಏ.13 2016 ಪಿಡಬ್ಲ್ಯೂಡಿ ಜೂನಿಯರ್‌ ಎಂಜಿನಿಯರ್‌ ಕೆ.ಎಸ್‌ ರಂಗನಾಥ್‌, ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುವ ಅನಿಲ್‌ ಕುಮಾರ್‌ ಬಿ ಹಾಗೂ ಮುರುಳಿಧರ್‌ ಬಂಧನ
ಏ.15 2016 ಸೋರಿಕೆ ಪ್ರಕರಣದಲ್ಲಿ ಶಂಕೆ ಮೇಲೆ 11 ಖಾಸಗಿ ಕಾಲೇಜುಗಳ ಮೇಲೆ ದಾಳಿ, ದಾಖಲೆಗಳ ವಶ
ಏ.18 2016 ಪಿಎಚ್‌.ಡಿ ವಿದ್ಯಾರ್ಥಿಗಳಾದ ಕೆ ನಾಗೇಂದ್ರ ಹಾಗೂ ತಿಮ್ಮೇಗೌಡ ಬಂಧನ
ಏ.25 2016 ಯಲಹಂಕ ಖಾಸಗಿ ಕಾಲೇಜು ಉಪನ್ಯಾಸಕ ಸಂತೋಷ ಬಂಧನ
ಮೇ.3 2016 ಕಿಂಗ್‌ಪಿನ್‌ ಶಿವಕುಮಾರಯ್ಯ ಬಂಧನ.
ಮೇ 10 2016 ಕಿರಣ್ ಅಲಿಯಾಸ್ ಕುಮಾರಸ್ವಾಮಿ ಅರೆಸ್ಟ್

SCROLL FOR NEXT