ರಾಜ್ಯ

ಎಸ್.ಸಿ.ಪಿ/ಟಿ.ಎಸ್.ಪಿ ಅನುದಾನ ನೆರೆ ಪರಿಹಾರಕ್ಕೆ ಬಳಕೆ, ಎಸ್ಸಿ, ಎಸ್ಟಿಗೆ ಬಡ್ಡಿ ರಹಿತ ಸಾಲ: ಸಿಎಂ ಯಡಿಯೂರಪ್ಪ

Lingaraj Badiger

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಶೇಷ ಘಟಕ ಯೋಜನೆಯಲ್ಲಿ 2019-20ನೇ ಸಾಲಿಗೆ 30,444.68 ಕೋಟಿ ರೂ ಅನುದಾನ ಹಂಚಿಕೆ ಮಾಡಲಾಗಿದೆ. ಆಗಸ್ಟ್ ತಿಂಗಳಾಂತ್ಯಕ್ಕೆ ಶೇ.18 ರಷ್ಟು ಪ್ರಗತಿಯಾಗಿದ್ದು, ಇದು ತಮಗೆ ಸಮಾಧಾನ ತಂದಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸೋಮವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದು ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ಜಾತಿ/ಪಂಗಡಗಳ ರಾಜ್ಯ ಪರಿಷತ್ ಸಭೆಯ ಬಳಿಕ ಸುದ್ದಿಗಾರರೊ೦ದಿಗೆ ಮಾತನಾಡಿದ ಯಡಿಯೂರಪ್ಪ, ಎಸ್ ಸಿಪಿ/ಟಿಎಸ್ ಪಿ ಅನುದಾನ ಬಳಕೆಯಲ್ಲಿ ಶೇ.18ರಷ್ಟು ಪ್ರಗತಿ ಸಾಧಿಸಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಪ್ರದರ್ಶಿಸುತ್ತದೆ. ಕನಿಷ್ಟ ಶೇ.50 ರಷ್ಟಾದರೂ ಪ್ರಗತಿ ಸಾಧಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಎಸ್.ಸಿ.ಪಿ/ ಟಿ.ಎಸ್.ಪಿ ಹಣದಲ್ಲಿ ಶೇ. 57% ರಷ್ಟನ್ನು ನೆರೆ ಸಂತ್ರಸ್ತ ಎಸ್ಸಿ‌/ಎಸ್ಟಿಗಳ ಸಮುದಾಯಗಳ ಮನೆ ನಿರ್ಮಾಣ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗೆ ಬಳಸಲು ಸೂಚನೆ ನೀಡಲಾಗಿದೆ. 29 ಇಲಾಖೆಗಳು ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದ್ದು, ವಿವಿಧ ಇಲಾಖೆಗಳಲ್ಲಿ‌ ಖರ್ಚಾಗದೇ ಉಳಿದ ಹಣವನ್ನು ಪ್ರವಾಹ ಸಂತ್ರಸ್ತ ಜಿಲ್ಲೆಗಳ ಪರಿಶಿಷ್ಟ ಜಾತಿ/ಪಂಗಡಗಳ ಸಮುದಾಯಗಳಿಗೆ ಮನೆ ನಿರ್ಮಿಸಿಕೊಡಲು ಬಳಸಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.

1,150 ಕೋಟಿ ರೂ ವಿವಿಧ ಯೋಜನೆಗಳಡಿ ಖರ್ಚಾಗದೆ ಅನುದಾನ ಉಳಿದಿದ್ದು, ಈ ಹಣವನ್ನು ಪ್ರವಾಹ ಪೀಡಿತ ಜಿಲ್ಲೆ ಗಳಲ್ಲಿ ಪರಿಹಾರ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲು ಸಭೆ ಒಪ್ಪಿಗೆ ನೀಡಿದೆ ಎಂದರು. 

ಇದೇ ವೇಳೆ ಎಸ್ಸಿ, ಎಸ್ಟಿ ಮಹಿಳೆಯರಿಗೆ 10 ಸಾವಿರ ರೂಪಾಯಿ ಬಡ್ಡಿ ರಹಿತ ಸಾಲ ನೀಡುವುದಾಗಿ ಸಿಎಂ ಘೋಷಿಸಿದರು. ಅಲ್ಲದೆ ಎಸ್ಸಿ, ಎಸ್ಟಿ ಹಾಲು ಉತ್ಪಾಕರಿಗೆ ಪ್ರತಿ ಲಿಟರ್ ಗೆ ಒಂದು ರೂಪಾಯಿ ಹೆಚ್ಚುವರಿ ಸಬ್ಸಿಡಿ ನೀಡುವುದಾಗ ತಿಳಿಸಿದರು. ಪ್ರಸ್ತುತ ಎಸ್ಸಿ, ಎಸ್ಟಿ ಹಾಲು ಉತ್ಪಾದಕರಿಗೆ ಐದು ರೂಪಾಯಿ ಸಬ್ಸಿಡಿ ನೀಡಲಾಗುತ್ತಿದ್ದು, ಅದು ಈಗ 6 ರೂಪಾಯಿಗೆ ಏರಿಕೆಯಾಗಲಿದೆ.

SCROLL FOR NEXT