ರಾಜ್ಯ

ಎಫ್ಐಆರ್ ದಾಖಲಿಸಲು ಠಾಣೆ ವ್ಯಾಪ್ತಿ ಕೇಳುವಂತಿಲ್ಲ: ಪೊಲೀಸರಿಗೆ ಹೈಕೋರ್ಟ್

Manjula VN

ಬೆಂಗಳೂರು: ಸಾರ್ವಜನಿಕರು ಯಾವುದೇ ಠಾಣೆಗೆ ದೂರು ನೀಡಿದಾಗ ಠಾಣೆ ವ್ಯಾಪ್ತಿ ಕೇಳದೆ ಎಫ್ಐಆರ್ ದಾಖಲಿಸಿಕೊಂಡು ನಂತರ ಸಂಬಂಧಪಟ್ಟ ಠಾಣೆಗಳಿಗೆ ಎಫ್ಐಆರ್ ಕಳಿಸಬೇಕೆಂದು ಎಲ್ಲಾ ಠಾಣೆಗಳಿಗೆ ಸೂಚಿಸಿ ಈ ಕುರಿತು ಆದೇಶವನ್ನು ಒಂದು ತಿಂಗಳೊಳಗೆ ಹೊರಡಿಸುವಂತೆ ರಾಜ್ಯ ಪೊಲೀಸ್ ನಿರ್ದೇಶಕರಿಗೆ ಹೈಕೋರ್ಟ್ ಗುರುವಾರ ನಿರ್ದೇಶಿಸಿದೆ. 

ನಗರದ ವಕೀಲ ಎಸ್.ಉಮಾಪತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಹಾಗೂ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ಪೀಠ ಗುರುವಾರ ಈ ಆದೇಶ ನೀಡಿತು.
 
ಸಾರ್ವಜನಿಕರು ಯಾವುದೇ ಠಾಣೆಗೆ ತೆರಳಿ ದೂರು ನೀಡಿದರೂ, ಠಾಣೆಯ ವ್ಯಾಪ್ತಿ ಕೇಳದೆ ಎಫ್ಐಆರ್ ದಾಖಲಿಸಬೇಕು. ಆ ನಂತರ ಎಫ್ಐಆರ್ ಅನ್ನು ಸಂಬಂಧಪಟ್ಟ ಠಾಣೆಗಳಿಗೆ ಕಳುಹಿಸಬೇಕು. ಪ್ರಕರಣ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣ ನೀಡಿ ಎಫ್ಐಆರ್ ದಾಖಲಿಸಲು ನಿರಾಕರಿಸಬಾರದು ಎಂದು ಎಲ್ಲಾ ಠಾಣಾಧಿಕಾರಿಗಳಿಗೆ ಸೂಚಿಸಿ ತಿಂಗಳೊಳಗೆ ಆದೇಶ ಹೊರಡಿಸಬೇಕು. ಒಂದೊಮ್ಮೆ ದೂರು ಸ್ವೀಕರಿಸಲು ನಿರಾಕರಿಸಿದರೆ, ಅಂಥಹವರ ವಿರುದ್ಧ ಸಾರ್ವಜನಿಕರು ನೀಡುವ ದೂರಿನ ಮೇಲೆ ಇಲಾಖೆ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸುವ ಕುರಿತು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಬೇಕು ಎಂದು ಡಿಜಿ ಮತ್ತು ಐಜಿಪಿಗೆ ಹೈಕೋರ್ಟ್ ನಿರ್ದೇಶಿಸಿದೆ. 

SCROLL FOR NEXT