ರಾಜ್ಯ

ಮಕ್ಕಳ ಗ್ರಂಥಾಲಯವಿರುವ ಸ್ಥಳದಲ್ಲಿ ತೇಜಸ್ವಿ ಸೂರ್ಯ ಕಚೇರಿ ಆರಂಭ:ಶಾಸಕಿ ಸೌಮ್ಯಾರೆಡ್ಡಿ ಅಸಮಾಧಾನ

Sumana Upadhyaya

ಬೆಂಗಳೂರು: ಮಾಜಿ ಸಂಸದ ದಿವಂಗತ ಅನಂತ್ ಕುಮಾರ್ ಬಳಸುತ್ತಿದ್ದ ಕಚೇರಿಯನ್ನು ನಿರಾಕರಿಸಿ ಮಕ್ಕಳ ಗ್ರಂಥಾಲಯ ಜಾಗದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಮ್ಮ ಅಧಿಕೃತ ಕಚೇರಿ ಪ್ರಾರಂಭ ಮಾಡುತ್ತಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಕ್ಷೇತ್ರದ ಜನರ ಜೊತೆಗೆ ಜಯನಗರ ಕಾಂಗ್ರೆಸ್ ಶಾಸಕಿ ಸೌಮ್ಯಾರೆಡ್ಡಿ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಯುಎನ್‍ಐ ಕನ್ನಡ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಸೌಮ್ಯಾರೆಡ್ಡಿ, ತಾವು ಜಯನಗರದ ಸ್ಥಳೀಯ ಶಾಸಕಿ. ಜಯನಗರ ವ್ಯಾಪ್ತಿಗೆ ಬರುವ ಬಿಬಿಎಂಪಿ ಕಟ್ಟಡದಲ್ಲಿ ಕಚೇರಿ ಪ್ರಾರಂಭಿಸುವ ಬಗ್ಗೆ ಸಂಸದರು ವಿಚಾರವನ್ನು ತಮ್ಮ ಗಮನಕ್ಕೆ ತಾರದೇ ನೇರವಾಗಿ ಬಿಬಿಎಂಪಿ ಆಯುಕ್ತರಿಂದಲೇ ಕಚೇರಿಯನ್ನು ನಿಗದಿ ಮಾಡಿಸಿಕೊಂಡಿದ್ದಾರೆ. ನಾನು ವಿಜಯ್ ಕುಮಾರ್ ಅವರು ಬಳಸುತ್ತಿದ್ದ ಶಾಸಕರ ಕಚೇರಿಯನ್ನೇ ಬಳಸುತ್ತಿದ್ದೇನೆ. ಅನಂತ್ ಕುಮಾರ್ ಅವರ ಕಚೇರಿ ಚೆನ್ನಾಗಿಯೆ ಇದೆ. ಅದನ್ನೇ ತೇಜಸ್ವಿ ಸೂರ್ಯ ಬಳಸಬಹುದಿತ್ತು. ಆದರೆ ಹೀಗೆ ಏಕೆ ಗ್ರಂಥಾಲಯವಿರುವ ಜಾಗದಲ್ಲಿ ಕಚೇರಿಯನ್ನು ಪ್ರಾರಂಭಿಸುತ್ತಿದ್ದಾರೋ ಗೊತ್ತಿಲ್ಲ ಎಂದರು.


ಬಿಬಿಎಂಪಿಯ 168ನೇ ವಾರ್ಡ್‌ನಲ್ಲಿ ಸಂಸದರ ಕಚೇರಿ ಆರಂಭವಾಗಲಿದೆ. ಈ ಮೊದಲು ಬಿಬಿಎಂಪಿ ಸೌತ್ ಎಂಡ್ ವೃತ್ತದಲ್ಲಿನ ದಿ. ಅನಂತ್ ಕುಮಾರ್ ಬಳಕೆ ಮಾಡುತ್ತಿದ್ದ ಕಚೇರಿಯನ್ನು ನೂತನ ಸಂಸದ ಕಚೇರಿಗಾಗಿ ನಿಗದಿ ಮಾಡಿತ್ತು. ಇದನ್ನು ನಿರಾಕರಿಸಿರುವ ತೇಜಸ್ವಿ ಸೂರ್ಯ ಬಿಬಿಎಂಪಿಯ 168ನೇ ವಾರ್ಡ್‌ನಲ್ಲಿರುವ ಗ್ರಂಥಾಲಯದ ಸ್ಥಳವನ್ನು ನೀಡುವಂತೆ ಕೇಳಿದ್ದು, ಇದನ್ನು ತೇಜಸ್ವಿ ಸೂರ್ಯ ಅವರ ಕೆಲಸಕಾರ್ಯಗಳಿಗೆ ಬಳಸಲು ಕಾಯ್ದಿರಿಸಲಾಗಿದೆ ಎಂದು ಆದೇಶ ಹೊರಡಿಸಿದೆ.


ಮಕ್ಕಳ ಪಾಠ ಕಲಿಕೆಗಾಗಿ ಇರುವ ಕೆಲವು ಗ್ರಂಥಾಲಯಗಳಲ್ಲಿ ಇದೂ ಸಹ ಒಂದು. ವಿಜಯ್ ಕಾಲೇಜ್ ಡಿಇಒ ಸಮೀರ್ ಸಿಂಹ ಅವರು ಇಲ್ಲಿ ಮಕ್ಕಳಿಗೆ ಟ್ಯೂಷನ್ ಮಾಡುತ್ತಿದ್ದರು. ಕೆಲವು ಸಂಘ ಸಂಸ್ಥೆಗಳು ಸುತ್ತಮುತ್ತಲಿನ ಬಡ ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಟ್ಯೂಷನ್ ಮಾಡಲು ಈ ಕಟ್ಟಡವನ್ನು ಉಪಯೋಗಿಸುತ್ತಿದ್ದವು.


ಮಕ್ಕಳ ಗ್ರಂಥಾಲಯ ಸ್ಥಳವನ್ನು ಕಚೇರಿಯಾಗಿ ತೇಜಸ್ವಿ ಸೂರ್ಯ ಬಳಸಲು ಮುಂದಾಗಿರುವುದಕ್ಕೆ ಸ್ಥಳೀಯ ಜನರು ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

SCROLL FOR NEXT