ರಾಜ್ಯ

ಸಂಚಾರಿ ಪೊಲೀಸ್'ರಿಂದ ಹಲ್ಲೆ: ಆಟೋ ಚಾಲಕನಿಗೆ ಜೀವ ಬೆದರಿಕೆ ಕರೆ

Manjula VN

ಬೆಂಗಳೂರು: ಸಂಚಾರಿ ಪೊಲೀಸ್ ಮುಖ್ಯ ಪೇದೆಯಿಂದ ಹಲ್ಲೆಗೊಳಗಾದ ಮಿನಿ ಟ್ರಕ್ ಚಾಲಕ ಸುನೀಲ್'ಗೆ ಜೀವ ಬೆದರಿಕೆ ಕರೆಗಳು ಬರುತ್ತಿರುವುದಾಗಿ ಗುರುವಾರ ತಿಳಿದುಬಂದಿದೆ. 

ಟೌನ್ ಹಾಲ್ ಬಳಿಯಿರುವ ಎನ್ಆರ್ ಜಂಕ್ಷನ್ ಬಳಿ ಒನ್ ವೇ ರಸ್ತೆಯಲ್ಲಿ ವಾಹನದಲ್ಲಿ ಬರುತ್ತಿದ್ದ ವೇಳೆ ಸಂಚಾರಿ ಪೊಲೀಸ್ ಮುಖ್ಯಪೇದೆ ಮಹದೇವ್ ಚಾಲಕನನ್ನು ತಡೆದಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಚಾಲಕನ ಮೇಲೆ ಪೊಲೀಸ್ ಹಲ್ಲೆ ನಡೆಸಿದ್ದರು. ಇದರ ವಿಡಿಯೋವನ್ನು ಸುನೀಲ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಘಟನೆ ಬಳಿಕ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದರು. 

ಘಟನೆ ಬಳಿಕ ಸುನೀಲ್'ಗೆ ಸಾಕಷ್ಟು ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ತಾಯಿ ರತ್ನಮ್ಮ ಅವರು ಹೇಳಿಕೊಂಡಿದ್ದಾರೆ. 

ಕಳೆದ ಸೋಮವಾರದಿಂದಲೂ ನನ್ನ ಮಗನಿಗೆ ಜೀವ ಬೆದರಿಕೆ ಕರೆಗಳು ಬರುತ್ತಲೇ ಇವೆ. ಇದೀಗ ನನ್ನ ಮಗ ಮನೆಗೇ ಬರುತ್ತಿಲ್ಲ. ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭದಲ್ಲಿ ಗುಂಪಿನಲ್ಲಿ ಬರುವ ಜನರು ಬೆದರಿಗೆ ಹಾಕುತ್ತಿದ್ದಾರೆ. ಈ ಬಗ್ಗೆ ಪುಟ್ಟೇನಹಳ್ಳಿ ಪೊಲೀಸರಿಗೆ ದೂರು ನೀಡಿದ್ದೇನೆ. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಮಹದೇವ್ ವಿರುದ್ಧ ದಾಖಲಾಗಿರುವ ಪ್ರಕರಣ ಹಿಂಪಡೆಯುವಂತೆ ಬೆದರಿಕೆ ಹಾಕುತ್ತಿದ್ದಾರೆ. ಕೆಲ ಹಿರಿಯ ಪೊಲೀಸ್ ಅಧಿಕಾರಿಗಳು ನನ್ನ ಮಗನೇ ತಪ್ಪು ಮಾಡಿದ್ದಾನೆಂದು ಹೇಳುತ್ತಿದ್ದಾರೆ. ನನ್ನ ಮಗನ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ರತ್ನಮ್ಮ ಹೇಳಿದ್ದಾರೆ. 
 
ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಮಹದೇವ್ ಅವರನ್ನು ಈಗಾಗಲೇ ಹಲಸೂರು ಗೇಟ್ ಪೊಲೀಸ್ ಠಾಣೆಯಿಂದ ವರ್ಗಾವಣೆ ಮಾಡಲಾಗಿದೆ ಎಂದು ಸಂಚಾರಿ ಡಿಸಿಪಿ ಜಗದೀಶ್ ತಿಳಿಸಿದ್ದಾರೆ. 

SCROLL FOR NEXT