ರಾಜ್ಯ

ಅನುದಾನ ನೀಡದ ಕೇಂದ್ರ: ವಿದ್ಯಾರ್ಥಿಗಳಿಗೆ ಸಿಗದ 2ನೇ ಸಮವಸ್ತ್ರ

Manjula VN

ಬೆಂಗಳೂರು: ಕೇಂದ್ರ ಸರ್ಕಾರ ಅನುದಾನ ನೀಡದ ಕಾರಣ ಸರ್ಕಾರಿ ಶಾಲಾ ಮಕ್ಕಳಿಗೆ ನೀಡುವ ಎರಡನೇ ಜೊತೆ ಸಮವಸ್ತ್ರ ಪ್ರಸಕ್ತ ಸಾಲಿನಲ್ಲಿ ನೀಡಲಾಗುತ್ತಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. 

ಸರ್ವಶಿಕ್ಷಣ ಅಭಿಯಾನ ಕಚೇರಿಯಲ್ಲಿ ಗುರುವಾರ ಖಾಸಗಿ ಶಾಲೆಗಳ ವಿವಿಧ ಸಂಘಟನೆಗಳೊಂದಿಗೆ ನಡೆಸಿದ ಸಭೆಯ ಬಳಿಕ ಮಾತನಾಡಿದ ಅವರು, ಈಗಾಗಲೇ ಮಕ್ಕಳಿಗೆ 1 ಜೊತೆ ಸಮವಸ್ತ್ರವನ್ನು ನೀಡಲಾಗಿದೆ. 2ನೇ ಜೊತೆಯನ್ನು ವಿವಿಧ ಕಾರಣಗಳಿಂದ ನೀಡಲಾಗುತ್ತಿಲ್ಲ. ಮುಂದಿನ ವರ್ಷ ಎರಡೂ ಜೊತೆ ನೀಡಲು ಪ್ರಯತ್ನಿಸುತ್ತೇವೆಂದು ಹೇಳಿದ್ದಾರೆ. 

 ಮಕ್ಕಳಿಗೆ 2 ಸಮವಸ್ತ್ರಗಳನ್ನು ನೀಡುವಂತೆ ಹೈಕೋರ್ಟ್ ಈ ಹಿಂದೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ಕೇಂದ್ರ ಸರ್ಕಾರ ಅನುದಾನ ನೀಡದ ಹಿನ್ನಲೆಯಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ರಾಜ್ಯ ಸರ್ಕಾರದ ನಿಧಿ ಬಳಸಿ ಸಮವಸ್ತ್ರಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. 

ಎಸ್ಎಸ್ಎಲ್'ಸಿ ಪರೀಕ್ಷೆ ಕುರಿತ ನಿರ್ಧಾರ ಶೀಘ್ರದಲ್ಲೇ ತೆಗೆದುಕೊಳ್ಳಲಾಗುವುದು
ಮುಂದಿನ ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆ ಮಾದರಿಯನ್ನು ಬದಲು ಮಾಡಲಾಗುತ್ತದೆ ಎಂಬ ಸುದ್ದಿಗಳು ಕೇಳಿ ಬಂದಿರುವ ಹಿನ್ನಲೆಯಲ್ಲಿ ಶೀಘ್ರದಲ್ಲಿಯೇ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ. 

6ರಿಂದ 8ನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ನಡೆಸಲಾಗುತ್ತದೆ. ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸುವ ಜೊತೆಗೆ ಪರೀಕ್ಷಾ ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶವನ್ನು ಹೊಂದಲಾಗಿದೆ. ಪಬ್ಲಿಕ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ನಿಗದಿತ ಅಂಕಗಳನ್ನು ಪಡೆಯದಿದ್ದರೆ, ಅನುತ್ತೀರ್ಣ ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ಇನ್ನಷ್ಟೇ ನಿರ್ಧರಿಸಬೇಕಿದೆ ಎಂದು ತಿಳಿಸಿದ್ದಾರೆ. 

SCROLL FOR NEXT