ರಾಜ್ಯ

ಕರ್ನಾಟಕದ ಜನತೆಯ ಹಿತದೃಷ್ಟಿಯಿಂದ ಕಾಸರಗೋಡು ಗಡಿ ಬಂದ್ ಮಾಡಲಾಗಿದೆ: ಸಿಎಂ ಯಡಿಯೂರಪ್ಪ

Sumana Upadhyaya

ಬೆಂಗಳೂರು: ಕರ್ನಾಟಕ ಜನತೆ ಹಿತದೃಷ್ಟಿಯಿಂದ ಕಾಸರಗೋಡು ಗಡಿ ಬಂದ್ ಮಾಡಲಾಗಿದ್ದು ವಿವಿಧ ವೈದ್ಯಕೀಯ ಸಂಘಟನೆಗಳ ಅಭಿಪ್ರಾಯ ಸಂಗ್ರಹಿಸಿ ಮತ್ತು ಸಾರ್ವಜನಿಕರ ಹಿತಾಸಕ್ತಿಯ ದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

ಕಾಸರಗೋಡು ಜನತೆ ಮಂಗಳೂರಿಗೆ ಚಿಕಿತ್ಸೆಗೆ ಬಂದರೆ ಇಲ್ಲಿನ ಜನತೆಗೆ ತೊಂದರೆಯಾಗುತ್ತದೆ ಎಂದು ಗಡಿ ಬಂದ್ ಮಾಡಲಾಗಿದ್ದು ಇದನ್ನು ಕೇರಳ ಸರ್ಕಾರ ತೀವ್ರ ಆಕ್ಷೇಪಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಇತ್ತ ಗಡಿ ಭಾಗದಲ್ಲಿ ನಿನ್ನೆ ಕೇರಳ ಮೂಲದ ಯುವಕರು ಕರ್ತವ್ಯ ನಿರತ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪೊಲೀಸ್ ಸಿಬ್ಬಂದಿ ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದು, ಪೊಲೀಸ್ ಪೇದೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮೂಲಗಳ ಪ್ರಕಾರ ಕೇರಳ ಕಡೆಯಿಂದ ವಾಹನದಲ್ಲಿ ಬಂದ ಯುವಕರ ತಂಡ ಕರ್ನಾಟಕ ಪ್ರವೇಶ ಮಾಡಲು ಪ್ರಯತ್ನ  ನಡೆಸಿತು, ಆಗ ಪೊಲೀಸರು ತಡೆದರು. ಆಗ ಆಕ್ರೋಶಗೊಂಡ ಯುವಕರ ತಂಡ ಪೊಲೀಸರ ಮೇಲೆ ಕಲ್ಲು ತೂರಿ ಪರಾರಿಯಾಗಿದೆ. ಕಲ್ಲು ತೂರಾಟದಲ್ಲಿ ಓರ್ವ ಪೇದೆ ಗಾಯಗೊಂಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಖುದ್ದು ಸಿಎಂ ಪ್ರತಿಕ್ರಿಯಿಸಿದ್ದು, ಕಾಸರಗೋಡು ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ನೆರೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳುವುದು ಅನಿವಾರ್ಯವಾಗಿದೆ. ಹೀಗಾಗಿ ಗಡಿಭಾಗ ಮುಚ್ಚಲಾಗಿದೆಯೇ ಹೊರತು ನೆರೆಯ ಕೇರಳದೊಂದಿಗೆ ಯಾವುದೇ ಹಿತಾಸಕ್ತಿ ಸಂಘರ್ಷವಿಲ್ಲ, ಪೂರ್ವಾಗ್ರಹವೂ ಇಲ್ಲ. ಇದನ್ನು ವಿರೋಧ ಪಕ್ಷದ ನಾಯಕರು ಅರ್ಥೈಸಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಇನ್ನು ಕರ್ನಾಟಕದಲ್ಲಿ ಕೊರೋನಾ ಸೋಂಕಿಗೆ 128 ಮಂದಿ ತುತ್ತಾಗಿದ್ದು, ಅವರಲ್ಲಿ ಮೂವರು ಮೃತಪಟ್ಟಿದ್ದಾರೆ. 11 ಮಂದಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಉಳಿದವರ ಚಿಕಿತ್ಸೆ ಮುಂದುವರಿದಿದೆ ಎಂದು ಸಿಎಂ ತಿಳಿಸಿದ್ದಾರೆ.

ಇಂದು ಪತ್ತೆಯಾದ ನಾಲ್ಕು ಪ್ರಕರಣದ ವಿವರ, ಸೋಂಕಿತರ ಜಿಲ್ಲಾವಾರು ಮಾಹಿತಿ, ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸಿದವರ ವಿವರಗಳನ್ನು ಸಹ ನೀಡಿದ್ದಾರೆ.

#ಕೋವಿಡ್19 ಸೋಂಕಿಗೆ ರಾಜ್ಯದಲ್ಲಿ 128 ಪ್ರಕರಣಗಳು ದೃಢಪಟ್ಟಿವೆ. ಇವುಗಳಲ್ಲಿ ಮೂವರು ಮೃತಪಟ್ಟಿದ್ದು, 11 ಮಂದಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಉಳಿದವರ ಚಿಕಿತ್ಸೆ ಮುಂದುವರೆದಿದೆ.
SCROLL FOR NEXT