ರಾಜ್ಯ

ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ಸೈನಿಕರ ಮಾದರಿಯಲ್ಲಿ ರೆಡಿ ಟು ಈಟ್ ಆಹಾರ!

Srinivasamurthy VN

ಮೈಸೂರು: ದೇಶಾದ್ಯಂತ ಸಾವಿನ ಭೀತಿ ಸೃಷ್ಟಿಸಿರುವ ಮಾರಕ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ಸೈನಿಕರ ಮಾದರಿಯಲ್ಲಿ ರೆಡಿ ಟು ಈಟ್ ಆಹಾರ ಸರಬರಾಜು ಮಾಡಲು ಮೈಸೂರು ಮೂಲದ ಖ್ಯಾತ ಆಹಾರ ಲ್ಯಾಬ್ ಸಿದ್ಧವಾಗಿದೆ.

ಮೈಸೂರು ಮೂಲದ ಡಿಫೆನ್ಸ್ ಫುಡ್ ರಿಸರ್ಚ್ ಲ್ಯಾಬೋರೇಟರಿ (Defence Food Research Laboratory-DFRL) ಕೊರೋನಾ ವಿರುದ್ದ ಹೋರಾಡುತ್ತಿರುವ ವೈದ್ಯರಿಗೆ ರೆಡಿ ಟು ಈಟ್ ಆಹಾರ ಪೂರೈಕೆ ಮಾಡಲು ಸಿದ್ಧವಾಗಿದ್ದೇವೆ ಎಂದು ಹೇಳಿದೆ. ಡಿಆರ್ ಡಿಒ ಅಧೀನದಲ್ಲಿ  ಬರುವ ಈ ಸಂಸ್ಥೆ ಗಡಿಯಲ್ಲಿ ಕಾರ್ಯ ನಿರ್ವಹಿಸುವ ಯೋಧರಿಗೆ ರೆಡಿ ಟು ಈಟ್ ಆಹಾರ ಪೂರೈಕೆ ಮಾಡುತ್ತಿದೆ. ಇದೀಗ ಅದೇ ಮಾದರಿಯ ಉತ್ತಮ ಗುಣಮಟ್ಟದ ಆಹಾರಗಳನ್ನು ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ನೀಡಲು  ಸಿದ್ಧವಾಗಿದ್ದೇವೆ ಎಂದು ಹೇಳಿದೆ.

ವೆಜ್ ಪಲಾವ್, ಬಿರಿಯಾನಿ, ದಾಲ್ ಮತ್ತು ರೈಸ್ ನಂತಹ ಹಲವು ಬಗೆಯ ಆಹಾರಗಳನ್ನು ಸಂಸ್ಥೆ ಸಿದ್ಧಪಡಿಸುತ್ತಿದ್ದು, ಅಗತ್ಯ ಬಿದ್ದರೆ ಈ ತಯಾರಿಕಾ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡುವುದಾಗಿ ಸಂಸ್ಥೆ ಹೇಳಿದೆ. ಈ ಕುರಿತು ಕೇಂದ್ರ ರಕ್ಷಣಾ ಸಚಿವಾಲಯದ  ನಿರ್ದೇಶನಕ್ಕೆ ತಾವು ಕಾಯುತ್ತಿದ್ದು, ಸೂಚನೆ ಬಂದರೆ ಕೂಡಲೇ ಈ ಬಗ್ಗೆ ಕಾರ್ಯ ಪ್ರವೃತ್ತರಾಗುತ್ತೇವೆ. ಈ ಸಂಬಂಧ ಸಂಸ್ಥೆಯಲ್ಲಿ ಸಾಕಷ್ಟು ಅಗತ್ಯವಸ್ತುಗಳ ದಾಸ್ತಾನಿದ್ದು, ಅಗತ್ಯ ಬಿದ್ದರೆ ಮತ್ತಷ್ಟು ವಸ್ತುಗಳ ದಾಸ್ತಾನು ಶೇಕರಿಸುವುದಾಗಿ ಸಂಸ್ಥೆ ಹೇಳಿದೆ. 

ಈ ಬಗ್ಗೆ ಮಾತನಾಡಿರುವ ಡಿಆರ್ ಡಿಒದ ಲೈಫ್ ಸೈನ್ಸಸ್ ವಿಭಾಗದ ನಿರ್ದೇಶಕ ಜನರಲ್ ಎಕೆ ಸಿಂಗ್ ಅವರು, ದೇಶದಲ್ಲಿ ಪ್ರಸ್ತುತ ಕೊರೋನಾ ವೈರಸ್ ಸಂಪೂರ್ಣ ನಿಯಂತ್ರಣದಲ್ಲಿದೆ. ಒಂದು ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ದಾಖಲಾದರೆ ಅವರಿಗೆ ಆಹಾರ ಒದಗಿಸಲು  ಸಮುದಾಯ ಅಡುಗೆ ಮನೆಯಲ್ಲಿ ಅಡುಗೆ ಮಾಡುವುದು ಅಪಾಯಕಾರಿಯಾಗಬಹುದು. ಹೀಗಾಗಿ ಪ್ಯಾರಾ ಮೆಡಿಕ್ಸ್, ಆಸ್ಪತ್ರೆ ಸಿಬ್ಬಂದಿಗಳು ಮತ್ತು ವೈದ್ಯರು ಆಹಾರ ತಯಾರಿಸಿಕೊಳ್ಳಲು ಸಮಯ ಸಿಗದೇ ಇರಬಹುದು. ಇದೇ ಕಾರಣಕ್ಕೆ ಸಂಸ್ಥೆ ಎಲ್ಲ ಪರಿಸ್ಥಿತಿಗಳಿಗೂ ತನ್ನನು ತಾನು ಸಿದ್ಧ  ಪಡಿಸಿಕೊಳ್ಳುತ್ತಿದೆ ಎಂದು ಹೇಳಿದರು.

DFRL ಈಗಾಗಲೇ ಭಾರತೀಯ ಸೈನಿಕರಿಗೆ ಮತ್ತು ಅಂತರಿಕ್ಷ ಪ್ರಯಾಣ ಮಾಡುವವರಿಗೆ ರೆಡಿ ಟು ಈಟ್ ಆಹಾರಗಳನ್ನು ಸರಬರಾಜು ಮಾಡುತ್ತಿದೆ. ಇನ್ನು ಡಿಆರ್ ಡಿಒ ಬಿಹೆಚ್ಇಎಲ್ ಮತ್ತು ಮೈಸೂರು ಮೂಲದ ವೆಂಟಿಲೇಟರ್ ತಯಾರಿಕಾ ಸಂಸ್ಥೆಗೆ ತಾಂತ್ರಿಕ ನೆರವು ನೀಡುತ್ತಿದ್ದು,  ಕಡಿಮೆ ಅವಧಿಯಲ್ಲಿ ತಯಾರಾಗುವ ಕಡಿಮೆ ವೆಚ್ಚದ ವೆಂಟಿಲೇಟರ್ ಗಳ ತಯಾರಿಕೆ ಮಾಡುತ್ತಿದೆ.

SCROLL FOR NEXT