ರಾಜ್ಯ

ಲಾಕ್ ಡೌನ್ ವಿಸ್ತರಣೆ ಕುರಿತು ಶೀಘ್ರ ತೀರ್ಮಾನ: ಬಸವರಾಜ ಬೊಮ್ಮಾಯಿ

Lingaraj Badiger

ಬೆಂಗಳೂರು: ಕೊರೋನಾ ವೈರಸ್ ನಿಯಂತ್ರಣ ಕುರಿತು ಹೇರಲಾಗಿರುವ ಲಾಕ್ ಡೌನ್ ವಿಸ್ತರಿಸಬೇಕೆ ಅಥವಾ ಬೇಡವೇ ಎನ್ನುವ ಕುರಿತು ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. 

ಲಾಕ್ ಡೌನ್ ವಿಸ್ತರಣೆ ಮಾಡಬೇಕೆ ಅಥವಾ ಬೇಡವೇ ಎನ್ನುವ ಕುರಿತು ಚರ್ಚೆ ನಡೆಯುತ್ತಿದೆ. ರಾಜ್ಯದ ಪರಿಸ್ಥಿತಿಯನ್ನು ನೋಡಿಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು. 

ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದ್ದು, ಜನತೆ ಇನ್ನೊಂದು ವಾರ ಲಾಕ್ಡೌನ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಾರದ ಬಳಿಕ ಪರಿಸ್ಥಿತಿ ಆಧಾರದ ಮೇಲೆ ವಿಸ್ತರಣೆ ಭವಿಷ್ಯ ನಿಂತಿದೆ ಎಂದು ಹೇಳಿದರು.

ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರದ ಆದೇಶಗಳನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಪೊಲೀಸರ ಜತೆ ಜನ ಸಾಮಾನ್ಯರು ಸಹಕಾರದಿಂದ ವರ್ತಿಸಿದರೆ ಪೊಲೀಸರು ಸಹ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ. ಇಲ್ಲವಾದಲ್ಲಿ ಕ್ರಮ ತೆಗೆದುಕೊಳ್ಳುವುದು ಖಚಿತ ಎಂದರು. 

ಕೊರೋನಾ ವೈರಸ್ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜನಸಾಮಾನ್ಯರು ಆತಂಕಪಡುವ ಅಗತ್ಯವಿಲ್ಲ ಇಲ್ಲ. ಇಡೀ ದೇಶದಲ್ಲಿ ಲಾಕ್ಡೌನ್ ಘೋಷಿಸಿದ ಮೊದಲ ರಾಜ್ಯ ಕರ್ನಾಟಕ; ಪರಿಣಾಮಕಾರಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿರುವ ರಾಜ್ಯವೂ ಸಹ ಕರ್ನಾಟಕ ಎಂದರು. 

ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಸಂಸದರ ವೇತನವನ್ನು ಶೇ. 30 ರಷ್ಟು ಕಡಿತಮಾಡಿಕೊಳ್ಳುವ ತೀರ್ಮಾನದ ಮಾದರಿಯಲ್ಲೇ ಮುಖ್ಯಮಂತ್ರಿ ಮಂತ್ರಿಗಳು, ಶಾಸಕರ ವೇತನ ಕಡಿತ ಮಾಡಿಕೊಳ್ಳುವ ಕುರಿತಂತೆಯೂ ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.

ಕೊರೋನಾ ವೈರಸ್ ಸಂಕಷ್ಟ ಸಂದರ್ಭದಲ್ಲಿ ಹಗಲು ರಾತ್ರಿ ದುಡಿಯುತ್ತಿರುವ ಪೊಲೀಸ್ ಸಿಬ್ಬಂದಿಗೆ ಭತ್ಯ ಹೆಚ್ಚಿಸುವ ಬೇಡಿಕೆ ಇದ್ದು, ಇದನ್ನು ಸಹ ಸಕಾರಾತ್ಮಕವಾಗಿ ಪರಿಗಣಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

SCROLL FOR NEXT