ರಾಜ್ಯ

ಕೂಲಿಕಾರ್ಮಿಕನಿಗೆ ಲಾಠಿ ಏಟು: ವಾಟ್ಸಪ್ ನಲ್ಲಿ ತಕ್ಷಣ ಸ್ಪಂದಿಸಿದ ಡಿಸಿ, ಅಧಿಕಾರಿಯ ಕಾರ್ಯಕ್ಕೆ ಮೆಚ್ಚುಗೆ

Nagaraja AB

ಗಂಗಾವತಿ: ಕೊರೋನಾದಂತಹ ತುರ್ತು ಪರಿಸ್ಥಿತಿ ನಿಭಾಯಿಸುವಲ್ಲಿ ಸದಾ ಮಗ್ನರಾಗಿರುವ  ಕೊಪ್ಪಳ ಜಿಲ್ಲಾಧಿಕಾರಿ ಸುನಿಲ್ ಕುಮಾರ್, ಸಾಮಾನ್ಯ ಕಾರ್ಮಿಕನೊಬ್ಬ ಮಾಡಿದ ಕೇವಲ ವಾಟ್ಸಫ್ ಮೆಸೇಜಿಗೂ ಸ್ಪಂದಿಸುವ ಮೂಲಕ ಜಿಲ್ಲೆಯ ಜನರಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಕೂಲಿ ಕಾರ್ಮಿಕಕನೊಬ್ಬ ನಿತ್ಯ ಅಗತ್ಯ ವಸ್ತುಗಳ ಖರೀದಿಗೆ ಎಂದು ಹಳ್ಳಿಯಿಂದ ನಗರಕ್ಕೆ ಬಂದಾಗ ವಿಚಾರಣೆ ನಡೆಸದೇ ಪೊಲೀಸರು ಲಾಠಿ ಬೀಸಿದ್ದಾರೆ. ಘಟನೆಯಿಂದ ವಿಚಲಿತನಾದ ಆ ಯುವಕ ನೋವಿನೊಂದಿಗೆ ಜಿಲ್ಲಾಧಿಕಾರಿಗೆ ಅವರಿಗೆ ಮೊಬೈಲ್ ನಲ್ಲಿ ಘಟನೆಯ ವಿವರವನ್ನು ಮೆಸೇಜ್ ಮಾಡಿದ್ದಾನೆ. ಯುವಕನ ಮೆಸೇಜ್ ಓದಿದ ಕೊಪ್ಪಳ ಜಿಲ್ಲಾಧಿಕಾರಿ ಸುನಿಲ್ ಕುಮಾರ್, ಕೂಡಲೆ ಯುವಕನ ನೆರವಿಗೆ ಧಾವಿಸಿದ್ದಾರೆ. 

ಹೊಸಳ್ಳಿ ಗ್ರಾಮದ ಕಟ್ಟಡ ಕಾರ್ಮಿಕ ಶಿವರಾಜ್, ನಿತ್ಯ ಅಗತ್ಯ ವಸ್ತುಗಳ ಖರೀದಿಗೆಂದು ನಗರಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರಿಬ್ಬರು ಯುವಕನ ಪೂರ್ವಪರ ವಿಚಾರಿಸದೇ ಥಳಿಸಿದ್ದಾರೆ. ಇದರಿಂದ ನೊಂದ ಯುವಕ ಕೂಡಲೆ ಘಟನೆಯ ವಿವರಣೆಯ ಮಾಹಿತಿಯನ್ನು ಜಿಲ್ಲಾಧಿಕಾರಿ ಅವರ ಮೊಬೈಲ್ಗೆ ವಾಟ್ಸಫ್ ಮೆಸೇಜ್ ಮೂಲಕ ಕಳುಹಿಸಿದ್ದಾರೆ

ಕೂಡಲೆ ಸ್ಪಂದಿಸಿದ ಜಿಲ್ಲಾಧಿಕಾರಿ, ವಿನಾಕಾರಣ ಲಾಠಿ ಚಾರ್ಜ್ ಮಾಡಿದ ಘಟನೆಯ ಬಗ್ಗೆ ವಿಚಾರಣೆ ನಡೆಸುವಂತೆ ಎಸ್ಪಿಗೆ ಸೂಚಿಸುತ್ತೇನೆ ಎಂದು ವಾಟ್ಸಫ್ ಮೆಸೇಜ್ ಮೂಲಕವೇ ಯವಕನಿಗೆ ಭರವಸೆ ನೀಡಿದ್ದಾರೆ. ಅಲ್ಲದೇ ಅಗತ್ಯತೆಗಳ ಬಗ್ಗೆ ತ್ವರಿತವಾಗಿ ಸ್ಪಂದಿಸಲಾಗುವುದು ಎಂದು ಯುವಕನಿಗೆ ಭರವಸೆ ನೀಡಿದ್ದಾರೆ. 

ಕೂಡಲೆ ಗಂಗಾವತಿ ತಾಲ್ಲೂಕು ಪಂಚಾಯಿತಿಯ ಇಒ ಡಾ.ಡಿ. ಮೋಹನ್ ಅವರನ್ನು ಸಂಪರ್ಕಿಸಿದ ಜಿಲ್ಲಾಧಿಕಾರಿ ಸುನಿಲ್ ಕುಮಾರ್, ಸಂತ್ರಸ್ತ ಯುವಕನನ್ನು ಸಂಪರ್ಕಿಸಿ ಸೂಕ್ತ ಏರ್ಪಾಡು ಮಾಡುವಂತೆ ಸೂಚನೆ ನೀಡಿದ್ದಾರೆ. 

ಡಿಸಿ ಸೂಚನೆಯ ಮೆರೆಗೆ ಮೋಹನ್, ಯುವಕನನ್ನು ಸಂಪರ್ಕಿದ್ದಾರೆ. ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲಿದ್ದು, ಹೊರಗೆ ಬಾರದಂತೆ ಮನವಿ ಮಾಡಿದ್ದಾರೆ. ಅಲ್ಲದೇ ಯುವಕನ ಕುಟುಂಬಕ್ಕೆ ಅಗತ್ಯವಿದ್ದ ವಸ್ತುಗಳನ್ನು ತಲುಪಿಸುವ ವ್ಯವಸ್ಥೆ ಅಧಿಕಾರಿ ಮಾಡಿದ್ದಾರೆ

ವರದಿ: ಶ್ರೀನಿವಾಸ್ .ಎಂ.ಜೆ

SCROLL FOR NEXT