ಮೈಸೂರು: ಮೈಸೂರಿನ ಆಂಗ್ಲ ಸಂಜೆ ದೈನಿಕ “ಸ್ಟಾರ್ ಆಫ್ ಮೈಸೂರು” ಕೊರೊನಾ ವೈರಾಣು ಸೋಂಕು ಬಿಕ್ಕಟ್ಟಿನಿಂದಾಗಿ ಏಪ್ರಿಲ್ 13 ರಿಂದ ತಾತ್ಕಾಲಿಕವಾಗಿ ಮುದ್ರಣ ಸ್ಥಗಿತಗೊಳಿಸಲಿದೆ.
ಈ ಬಗ್ಗೆ ಏಪ್ರಿಲ್ 12 ರ ಪತ್ರಿಕೆಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಇದು ಓದುಗರಲ್ಲಿ ತೀವ್ರ ನಿರಾಸೆ ಮೂಡಿಸಿದೆ. ಪ್ರತಿದಿನ ಸಂಜೆ ಇತ್ತೀಚಿನ ಸುದ್ದಿಗಳನ್ನು ತಿಳಿಯಲು ಮೈಸೂರಿನ ಜನರು ಹೆಚ್ಚಾಗಿ ಈ ಪತ್ರಿಕೆ ಓದುತ್ತಿದ್ದರು. 43 ವರ್ಷಗಳಿಂದ ಮನೆಮನೆಗೆ ತಲುಪಿಸಲ್ಪಡುವ ಏಕೈಕ ಆಂಗ್ಲ ದೈನಿಕ ಸ್ಟಾರ್ ಆಫ್ ಮೈಸೂರ್, ಅರಮನೆ ನಗರಿಯ ಜನಪ್ರಿಯ ಪತ್ರಿಕೆ.
ಇದೀಗ ದೇಶಾದ್ಯಂತ ವಿಧಿಸಲಾಗಿರುವ ಲಾಕ್ ಡೌನ್ ನಿಂದಾಗಿ ಪತ್ರಿಕೆ ಅನೇಕ ಸವಾಲುಗಳನ್ನು ಎದುರಿಸಬೇಕಿದೆ. ಮುದ್ರಣಕ್ಕೆ ಅಗತ್ಯವಿರುವ ಸಾಮಗ್ರಿಗಳ ಕೊರತೆ, ಪತ್ರಿಕಾ ವಿತರಕರು, ಸಿಬ್ಬಂದಿಯ ಕೊರತೆ ಸೇರಿದಂತೆ ಹಲವು ಸಮಸ್ಯೆ ಕಾಡಿದೆ. ಹೀಗಾಗಿ ತಾತ್ಕಾಲಿಕವಾಗಿ ಪತ್ರಿಕೆಯ ಮುದ್ರಣವನ್ನು ಸ್ಥಗಿತಗೊಳಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಸೋಮವಾರದಿಂದ ಪರಿಸ್ಥಿತಿ ಸುಧಾರಿಸುವವರಿಗೆ ಮುದ್ರಣ ಸ್ಥಗಿತಗೊಳಿಸಲು ಮಂಡಳಿ ತೀರ್ಮಾನ ಮಾಡಿದೆ.