ಕೊಪ್ಪಳ: ಲಾಕ್ ಡೌನ್ ನಿಂದಾಗಿ ಈಶಾನ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿರುವುದರಿಂದ ಅದರ 22,300 ಸಿಬ್ಬಂದಿಗಳ ಏಪ್ರಿಲ್ ತಿಂಗಳ ವೇತನ ಮತ್ತು ಇತರ ಸೌಲಭ್ಯಗಳನ್ನು ಕಡಿತಗೊಳಿಸಲಾಗಿದೆ. ನಿಗಮಕ್ಕೆ ಈಗಾಗಲೇ 142 ಕೋಟಿ ನಷ್ಟವುಂಟಾಗಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಕೊಪ್ಪಳ ವಿಭಾಗದ ನಿಯಂತ್ರಕ ಮೆಹಮ್ಮೂದ್ ಮುಲ್ಲಾ, ಕೊಪ್ಪಳ ವಿಭಾಗದಲ್ಲಿ 1,947 ನೌಕರರಿದ್ದಾರೆ. ಅವರಲ್ಲಿ ಅಧಿಕಾರಿಗಳು, ಚಾಲಕರು, ನಿರ್ವಾಹಕರು, ಮೆಕ್ಯಾನಿಕಲ್ ವಿಭಾಗಗಳಲ್ಲಿ ಕೆಲಸ ಮಾಡುವವರು ಸೇರಿದ್ದಾರೆ. ಮಾರ್ಚ್ 25ರಿಂದ ಎಲ್ಲಾ 439 ಬಸ್ಸುಗಳು ಸಂಚಾರ ನಿಲ್ಲಿಸಿವೆ ಎಂದರು.
ಈಶಾನ್ಯ ಸಾರಿಗೆ ನಿಗಮ ಪ್ರತಿ ತಿಂಗಳು ಬರುವ ಆದಾಯದಲ್ಲಿ ಉದ್ಯೋಗಿಗಳಿಗೆ 68 ಕೋಟಿಯಷ್ಟು ನೀಡುತ್ತದೆ. ಬಸ್ಸುಗಳ ಸಂಚಾರವಿಲ್ಲದಿರುವುದರಿಂದ ಈಗ ವೇತನ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಉದ್ಯೋಗಿಗಳ ರಕ್ಷಣೆಗೆ ಬರಬೇಕು ಎಂದು ಕೊಪ್ಪಳ ವಿಭಾಗದ ಚಾಲಕ ಮತ್ತು ನಿರ್ವಾಹಕರು ಒತ್ತಾಯಿಸುತ್ತಿದ್ದಾರೆ.