ರಾಜ್ಯ

ಮಡಿಕೇರಿ: ರಸ್ತೆಯಲ್ಲೇ ಬಡಿದಾಡಿಕೊಂಡಿದ್ದ ಇಬ್ಬರು ಅಬಕಾರಿ ಅಧಿಕಾರಿಗಳ ಅಮಾನತು

Nagaraja AB

ಮಡಿಕೇರಿ: ಅಕ್ರಮ ಮದ್ಯ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರದಲ್ಲಿ ನಡು ರಸ್ತೆಯಲ್ಲಿಯೇ ಬಡಿದಾಡಿಕೊಂಡ ಕೊಡಗು ಜಿಲ್ಲೆಯ ಇಬ್ಬರು ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಿ ರಾಜ್ಯ ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ

ಅಬಕಾರಿ ಇಲಾಖೆಯ ಉಪ ಅಧೀಕ್ಷಕ ಎಚ್.ಎಸ್. ಶಿವಪ್ಪ ಮತ್ತು ಅಬಕಾರಿ ನಿರೀಕ್ಷಕ ಎಂ. ನಟರಾಜ್ ಎಂಬವರೇ ಅಮಾನತಾದ ಅಧಿಕಾರಿಗಳಾಗಿದ್ದಾರೆ ಎಂದು ಕೊಡಗು ಜಿಲ್ಲಾ ಅಬಕಾರಿ ಆಯುಕ್ತೆ ಬಿಂದುಶ್ರೀ ತಿಳಿಸಿದ್ದಾರೆ.ಇದರೊಂದಿಗೆ, ಈ ಇಬ್ಬರು ಅಧಿಕಾರಿಗಳ ಮೇಲೆ ಇಲಾಖಾ ತನಿಖೆ ನಡೆಸಲು ಕೂಡ ಸೂಚನೆ ನೀಡಲಾಗಿದೆ

ಪ್ರಕರಣವೊಂದಕ್ಕೆ ಸಂಬಂಧಿಸಿ ಅಬಕಾರಿ ಉಪ ಅಧೀಕ್ಷಕ ಶಿವಪ್ಪ ಅವರು ಸ್ಥಳ ಪರಿಶೀಲನೆ ನಡೆಸಿ ತೆರಳಿದ ಸ್ವಲ್ಪ ಹೊತ್ತಿನ ಬಳಿಕ ಇದೇ ಸ್ಥಳಕ್ಕೆ ಬಂದ ಅಬಕಾರಿ ಇನ್‌ಸ್ಪೆಕ್ಟರ್‌ ನಟರಾಜ್‌ ಮತ್ತು ಉಪ ಅಧೀಕ್ಷಕ ಶಿವಣ್ಣ ಅವರ ನಡುವೆ ಅಕ್ರಮ ಮದ್ಯ ಪರಿಶೀಲನೆಗೆ ಸಂಬಂಧಿಸಿ ಮಾತಿನ ಚಕಮಕಿ ನಡೆದಿತ್ತು. ಮಾತ್ರವಲ್ಲದೇ ಇವರಿಬ್ಬರ ನಡುವೆ ತೀರಾ ಅಶ್ಲೀಲ ಪದಗಳ ಬಳಕೆಯಾಗಿತ್ತು. ಬಳಿಕ ಅಧಿಕಾರಿಗಳು ಕೈಕೈ ಮಿಲಾಯಿಸಿಕೊಂಡಿದ್ದರು

ವಾಹನ ಚಾಲಕ ಮನೋಹರ್‌ ಕೂಡ ಶಿವಣ್ಣ ಅವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಅಧಿಕಾರಿಗಳ ಈ ಬೀದಿ ಕಾಳಗವನ್ನು ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ವೈರಲ್‌ ಮಾಡಿದ್ದರು. 

ಶನಿವಾರ ಸಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆ ಬಗ್ಗೆ ಪರಿಶೀಲನೆ ನಡೆಸಿದ್ದ ಕೊಡಗು ಜಿಲ್ಲಾ ಅಬಕಾರಿ ಆಯುಕ್ತೆ ಬಿಂದುಶ್ರೀ ಅವರು ಮೇಲಧಿಕಾರಿಗಳಿಗೆ ಮಾಹಿತಿ ನೀಡಿ, ಈ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದರು.

SCROLL FOR NEXT