ರಾಜ್ಯ

ಏ.20ರ ನಂತರ ರಾಜ್ಯದ ಹಸಿರು ವಲಯಗಳಲ್ಲಿ ಹೋಂ ಸ್ಟೇ, ಹೊಟೇಲ್ ಗಳು ಕಾರ್ಯಾರಂಭ

Sumana Upadhyaya

ಬೆಂಗಳೂರು: ಏಪ್ರಿಲ್ 20ರ ನಂತರ ರಾಜ್ಯದಲ್ಲಿ ಯಾವುದೆಲ್ಲಾ ತೆರೆದಿರುತ್ತದೆ, ಯಾವುದೆಲ್ಲಾ ಮುಚ್ಚಲ್ಪಟ್ಟಿರುತ್ತವೆ ಎಂದು ಸರ್ಕಾರ ಪಟ್ಟಿ ತಯಾರಿಸುತ್ತಿರುವ ಮಧ್ಯೆ ಪ್ರವಾಸೋದ್ಯಮ ಇಲಾಖೆ ಹೋಮ್ ಸ್ಟೇ ಮತ್ತು ಹೊಟೇಲ್ ಗಳನ್ನು ತೆರೆದು ಕಾರ್ಯಾರಂಭ ಮಾಡಲು ನಿರ್ಧರಿಸಿದೆ.

ಸರ್ಕಾರ ಈ ಬಗ್ಗೆ ಕಳೆದೊಂದು ವಾರದಿಂದ ಚರ್ಚಿಸುತ್ತಿದ್ದು ಆರ್ಥಿಕತೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ಈ ತೀರ್ಮಾನ ಕೈಗೊಂಡಿದೆ.

ಸರ್ಕಾರ ಹಸಿರು ವಲಯಗಳಲ್ಲಿ ಯಾವುದೇ ಕೊರೋನಾ ಕೇಸುಗಳು ಕಂಡುಬರದ ಪ್ರದೇಶಗಳಲ್ಲಿ ಮಾತ್ರ ಹೋಂಸ್ಟೇ ಮತ್ತು ಹೊಟೇಲ್ ಗಳನ್ನು ತೆರೆಯಲು ಸದ್ಯಕ್ಕೆ ನಿರ್ಧರಿಸಿದೆ. ಸ್ವದೇಶಿ ಪ್ರವಾಸೋದ್ಯಮವನ್ನು ಪ್ರಚುರಪಡಿಸಲು ಸರ್ಕಾರ ಮುಂದಾಗಿದೆ. ಕೆಂಪು ಮತ್ತು ಆರೆಂಜ್ ಪ್ರದೇಶಗಳಿಂದ ಬರುವ ಪ್ರವಾಸಿಗರು ಮತ್ತು ವಿದೇಶಿಗರನ್ನು ಇಲ್ಲಿಗೆ ಸೇರಿಸಿಕೊಳ್ಳುವುದಿಲ್ಲ. ಯಾರಾದರೂ ನಿಯಮ ಉಲ್ಲಂಘಿಸಿರುವುದು ಕಂಡುಬಂದರೆ ಪರವಾನಗಿ ರದ್ದುಪಡಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ ಟಿ ರವಿ ತಿಳಿಸಿದ್ದಾರೆ.

ಪ್ರವಾಸೋದ್ಯಮ ಇಲಾಖೆಯ ಪ್ರಕಾರ ಹೋಮ್ ಸ್ಟೇ ಮತ್ತು ಹೊಟೇಲ್ ಗಳು ತೆರೆಯುವ ಜಿಲ್ಲೆಗಳು ಕೊಡಗು, ಚಿಕ್ಕಮಗಳೂರು, ಹಾವೇರಿ, ಚಾಮರಾಜನಗರ, ಕೋಲಾರ, ಹಾಸನ, ರಾಯಚೂರು, ಯಾದಗಿರಿ, ರಾಮನಗರ, ಶಿವಮೊಗ್ಗ ಮತ್ತು ಚಿತ್ರದುರ್ಗ ಆಗಿವೆ. ಹೋಮ್ ಸ್ಟೇ ಮತ್ತು ಹೊಟೇಲ್ ಗಳಲ್ಲಿ ಬಾರ್ ಮತ್ತು ರೆಸ್ಟೊರೆಂಟ್ ಗಳಿಗೆ ಅನುಮತಿ ನೀಡುವುದಿಲ್ಲ. ಕೆಲವು ಕೋಣೆಗಳನ್ನು ಮಾತ್ರ ತೆರೆಯಲು ಅವಕಾಶ ನೀಡಲಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಅಗತ್ಯ ಸಿಬ್ಬಂದಿಯನ್ನು ಮಾತ್ರ ಕೆಲಸಕ್ಕೆ ಬರಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಸಿ ಟಿ ರವಿ ತಿಳಿಸಿದ್ದಾರೆ.

ಅಗತ್ಯವಿದ್ದರೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮದ ಹೊಟೇಲ್ ಗಳನ್ನು ಸರ್ಕಾರಕ್ಕೆ ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾಡಿಕೊಳ್ಳಲು ನೀಡುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT