ರಾಜ್ಯ

ಪಾದರಾಯನಾಪುರದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆ; 54ಕ್ಕೂ ಹೆಚ್ಚು ಮಂದಿ ವಶಕ್ಕೆ, 4 ಎಫ್ ಐಆರ್

Srinivasamurthy VN

ಬೆಂಗಳೂರು: ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮಕ್ಕೆ ಮುಂದಾಗಿರುವ ಪೊಲೀಸರು ಈ ವರೆಗೂ ಸುಮಾರು 54 ಮಂದಿಯನ್ನು ವಶಕ್ಕೆ ಪಡೆದಿದ್ದು, 4 ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ ಎಂದು  ತಿಳಿದುಬಂದಿದೆ.

ಈ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ಪೊಲೀಸರು, ವೈದ್ಯರು ಮತ್ತು ಆಶಾಕಾರ್ಯಕರ್ತೆಯರ ವಿರುದ್ಧ ಹಲ್ಲೆ ಮಾಡಿದ್ದ ಪುಂಡರ ವಿರುದ್ಧ ಇದೀಗ ಪೊಲೀಸರು ಒಟ್ಟು ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಐಪಿಸಿ ಸೆಕ್ಷನ್ 353, 307, ಎನ್ ಡಿಎಂಎ 353, 332, 354, 201ರ  ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಅಂತೆಯೇ ಇಂದು ಮತ್ತೊಂದು ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ.

ಪಾದರಾಯನಪುರ ಕಂಪ್ಲೀಟ್ ಸೀಲ್ ಡೌನ್, ಹೆಜ್ಜೆ ಹೆಜ್ಜೆಗೂ ಖಾಕಿ ಸರ್ಪಗಾವಲು
ನಿನ್ನೆ ಪೊಲೀಸರ ವಿರುದ್ಧವೇ ಪುಂಡರು ಹಲ್ಲೆ ಮಾಡಿರುವ ಪ್ರಕರಣದ ಬೆನ್ನಲ್ಲೇ ಇಂದು ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಪಾದರಾಯನಪುರಕ್ಕೆ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಿದೆ. ಸುಮಾರು 100ಕ್ಕೂ ಅಧಿಕ ಪೊಲೀಸರು ಇಂದು ಬೆಳಗ್ಗೆಯೇ ಘಟನಾ ಸ್ಥಳದಲ್ಲಿ  ನಿಯೋಜನೆಗೊಂಡಿದ್ದು, ಇಂದು ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡುವ ಸಾಧ್ಯತೆ ಇದೆ. ಅಂತೆಯೇ ಅಧಿಕಾರಿಗಳು ಜೆಜೆ ನಗರ ಠಾಣೆಗೆ ಭೇಟಿ. ಘಟನಾ ಸ್ಥಳಗಳ ಪರಿಶೀಲನೆ ನಡೆಸಲಿದ್ದಾರೆ.

ಬ್ಯಾರಿಕೇಡ್ ಎಳೆದು ಬಿಸಾಕಿದ್ದ ಮಹಿಳೆ ಕೂಡ ಪೊಲೀಸ್ ವಶಕ್ಕೆ
ಇನ್ನು ಗಲಾಟೆ ವೇಳೆ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಅನ್ನು ಎಳೆದು ಬಿಸಾಕಿದ್ದ ಓರ್ವ ಮಹಿಳೆಯನ್ನೂ ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತ ಮಹಿಳೆಯನ್ನು ಫರೋಜಾ ಅಲಿಯಾಸ್ ಲೇಡಿ ಡಾನ್ ಎಂದು ಗುರುತಿಸಲಾಗಿದ್ದು, ಈ ಹಿಂದೆ ಇದೇ ಮಹಿಳೆ ಗಾಂಜಾ ಮಾರಾಟ ಮಾಡಿ ಪೊಲೀಸರ ಅತಿಥಿಯಾಗಿದ್ದಳು ಎನ್ನಲಾಗಿದೆ. ಈಕೆಯೇ ಗಲಾಟೆಗಾಗಿ ಹುಡುಗರನ್ನು ಕರೆಸಿದ್ದಾಳೆ ಎಂಬ ಮಾಹಿತಿ ಇದೆ. ಹೀಗಾಗಿ ಆಕೆಯನ್ನೂ ಬಂಧಿಸಲಾಗಿದೆ. ಅಲ್ಲದೆ ಆಕೆ ನೀಡಿರುವ ಮಾಹಿತಿ ಮೇರೆಗೆ 20ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದೇವೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೆಂದು ಮುಖರ್ಜಿ ಹೇಳಿದ್ದಾರೆ.

ಕೂಗಳತೆ ದೂರದಲ್ಲೇ ಕಾರ್ಪೋರೇಟರ್ ಮನೆ, ಶಾಸಕರು ಪತ್ತೆಯೇ ಇಲ್ಲ
ಇನ್ನು ಘಟನೆ ನಡೆದ ಸ್ಥಳದಿಂದ ಕೂಗಳತೆ ದೂರದಲ್ಲೇ ಸ್ಥಳೀಯ ಕಾರ್ಪೋರೇಟರ್ ಸೀಮಾ ಅಲ್ತಾಫ್ ಖಾನ್ ಅವರ ಮನೆ ಕೂಡ ಇದ್ದು, ಇದೇ ಸ್ಥಳದ ಕೂಗಳತೆ ದೂರದಲ್ಲೇ ಮಾಜಿ ಕಾರ್ಪೋರೇಟರ್ ಆರಿಫಾ ಪಾಷಾ ಮತ್ತು ಅವರ ಪುತ್ರ ಇಮ್ರಾನ್ ಪಾಷಾ ಅವರ ಮನೆಕೂಡ ಇದೆ.  ಸ್ಥಳೀಯ ನಾಯಕ ಮತ್ತು ಕಾರ್ಪೋರೇಟರ್ ಪತಿ ಅಲ್ತಾಫ್ ಖಾನ್ ಅವರೂ ಕೂಡ ತಮ್ಮದೇ ಪ್ರದೇಶದಲ್ಲಿ ಇಷ್ಟೆಲ್ಲಾ ಗಲಾಟೆ ಸಂಭವಿಸುತ್ತಿದ್ದರೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಇದ್ದದ್ದು, ಕೃತ್ಯ ಪೂರ್ವ ನಿಯೋಜತವೇ ಎಂಬ ಪ್ರಶ್ನೆ ಮೂಡಿಸುತ್ತಿದೆ. 

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ್ದ ಸ್ಥಳೀಯ ಕಾರ್ಪೋರೇಟರ್ ಇಮ್ರಾನ್ ಪಾಷಾ, ಕೆಲ ಯುವಕರು ದಾಳಿ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇಂದು ಭಾನುವಾರ ಆಗಿದ್ದರಿಂದ ಪೊಲೀಸರು ಸಹ ಕಡಿಮೆ ಸಂಖ್ಯೆಯಲ್ಲಿದ್ದರು. ಈ ರೀತಿ ಘಟನೆ ನಡೆದಿದ್ದು, ಇದೇ  ಮೊದಲು ಪಾದರಾಯನಪುರದ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಇಲ್ಲ. ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕಿದೆ ಎಂದು ಹಾರಿಕೆಯ ಉತ್ತರವನ್ನು ನೀಡಿದ್ದಾರೆ.

SCROLL FOR NEXT