ಬಾಗಲಕೋಟೆ ಹಳೆ ಪಟ್ಟಣದ ಒಳ ರಸ್ತೆ ಬಂದ್ ಮಾಡಿರುವ ನೋಟ 
ರಾಜ್ಯ

ಬಾಗಲಕೋಟೆ: ಜಿಲ್ಲೆಯ ವಾಣಿಜ್ಯ ಚಟುವಟಿಕೆಗಳಿಗೆ ಅಂದು ಆಲಮಟ್ಟಿ ಸಮಸ್ಯೆ, ಇಂದು ಕೊರೋನಾ ಅಡ್ಡಿ!

ವಿಶ್ವವನ್ನೆ ನಡುಗಿಸುತ್ತಿರುವ ಕೊರೋನಾ ಜಿಲ್ಲೆಯ ವಾಣಿಜ್ಯ ನಗರಗಳನ್ನು ತನ್ನ ಅಡ್ಡಾಗಳನ್ನಾಗಿಸಿಕೊಳ್ಳುತ್ತಿದೆ. ಇದು ಜಿಲ್ಲೆಯ ವಾಣಿಜ್ಯ, ಕೃಷಿ, ಕೈಗಾರಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡತೊಡಗಿದೆ.

ಬಾಗಲಕೋಟೆ: ವಿಶ್ವವನ್ನೆ ನಡುಗಿಸುತ್ತಿರುವ ಕೊರೋನಾ ಜಿಲ್ಲೆಯ ವಾಣಿಜ್ಯ ನಗರಗಳನ್ನು ತನ್ನ ಅಡ್ಡಾಗಳನ್ನಾಗಿಸಿಕೊಳ್ಳುತ್ತಿದೆ. ಇದು ಜಿಲ್ಲೆಯ ವಾಣಿಜ್ಯ, ಕೃಷಿ, ಕೈಗಾರಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡತೊಡಗಿದೆ.

ಒಂದು ಕಾಲಕ್ಕೆ ಬೃಹತ್ ವಾಣಿಜ್ಯ ಕೇಂದ್ರವಾಗಿದ್ದ ಬಾಗಲಕೋಟೆ ಹಳೆ ಪಟ್ಟಣ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದಾಗಿ ಸ್ಥಳಾಂತರದ ಭರದಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ವ್ಯಾಪಾರ ವಹಿವಾಟುಗಳಿಲ್ಲದೆ ಎರಡು ದಶಕಗಳ ಕಾಲ ಜರ್ಝರಿತವಾಗಿ ಹೋಗಿತ್ತು. ಬಾಗಲಕೋಟೆಗೆ ಪ್ರಮುಖ ರಸ್ತೆಗಳೆಲ್ಲ ಹಿನ್ನೀರಿನಿಂದಾಗಿ ಮುಳುಗಿ ಹೋಗಿದ್ದವು. ಜಿಲ್ಲೆಯ ಯಾವ ಭಾಗದಿಂದಲೂ ಜನ ಬಾರದ ಸ್ಥಿತಿ ನಿರ್ಮಾಣವಾಗಿತ್ತು. ಬರಬೇಕು ಅಂದರೂ ಸುತ್ತು ಬಳಸಿ ಬರಬೇಕಿತ್ತು. ಐದು ರೂ.ಗಳ ಬಸ್ ದರಕ್ಕೆ ೨೫ ರಿಂದ ೩೦ ರೂಪಾಯಿ ಕೊಟ್ಟು ಬರಬೇಕಿತ್ತು. ಪರಿಸ್ಥಿತಿ ಹೀಗಾದ ಬಳಿಕವೂ ಸಂಪರ್ಕ ರಸ್ತೆಗಳ ಸುಧಾರಣೆ, ಮಾರುಕಟ್ಟೆ ವ್ಯವಸ್ಥೆ ಪುನಶ್ಚೇತನಗೊಳ್ಳಲು ಒಂದುವರೆ ದಶಕವೇ ಹಿಡಿಯಿತು.

ಕಳೆದ ಐದಾರು ವರ್ಷಗಳಿಂದಿಚೆಗೆ ಬಾಗಲಕೋಟೆ ವ್ಯವಹಾರಿಕವಾಗಿ ಮತ್ತೇ ಸೆಟೆದು ನಿಂತಿದೆ. ಕಳೆದು ಹೋಗಿದ್ದ ಅಸ್ತಿತ್ವವನ್ನು ಗಳಿಸಿಕೊಳ್ಳುತ್ತಿದೆ. ಜಿಲ್ಲೆಯ ಇನ್ನೊಂದು ಪ್ರಮುಖ ನಗರ ಮುಧೋಳ. ಮುಧೋಳ ತಾಲೂಕು ಮೊದಲಿನಿಂದಲೂ ಸುಣ್ಣದ ಕಲ್ಲು, ಸಿಮೆಂಟ್ ಉತ್ಪಾದನೆಗೆ ಹೆಸರು ಮಾಡಿದ್ದ ಪ್ರದೇಶ. ಈ ಭಾಗ ಸಂಪೂರ್ಣ ನೀರಾವರಿ ಆಗಿದ್ದೆ ತಡ ಇಲ್ಲಿ ಕೃಷಿ ಸಾಂಪ್ರದಾಯಿಕ ಉದ್ಯೋಗವಾಗಿ ಉಳಿದುಕೊಳ್ಳದೇ ಕೃಷಿ ಉದ್ಯಮ ಎನ್ನುವ ಹಂತಕ್ಕೆ ಬೆಳೆದು ಇಡೀ ತಾಲೂಕು ವಾಣಿಜ್ಯ ಪ್ರದೇಶವಾಗಿ ಮಾರ್ಪಟ್ಟಿದೆ. ಕೃಷಿ ಮತ್ತು ಕೈಗಾರಿಕೆ ಉತ್ಪನ್ನಗಳನ್ನು ಇಂದು ವಿದೇಶಕ್ಕೆ ರಫ್ತು ಮಾಡುವ ಸ್ಥಿತಿಯಲ್ಲಿದೆ. ಈ ಪ್ರದೇಶದ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಕೆಲವೇ ವಾಣಿಜ್ಯ ನಗರಗಳ ಪೈಕಿ ಮುಧೋಳ ಕೂಡ ಒಂದು ಎನ್ನುವ ಪಟ್ಟಿಯಲ್ಲಿದೆ.

ಜಿಲ್ಲೆಯ ಇನ್ನೊಂದು ವಾಣಿಜ್ಯ ನಗರ ಜಮಖಂಡಿ. ಇದು ಮೊದಲಿನಿಂದಲೂ ಮರಾಠಿ ಸಂಸ್ಥಾನಿಕರ ಕೇಂದ್ರಸ್ಥಾನ. ಪಕ್ಕದ ಮಹಾರಾಷ್ಟ್ರದೊಂದಿಗೆ ವಾಣಿಜ್ಯ ಮತ್ತು ವ್ಯವಹಾರಗಳಿಗೆ ಸಂಬಂಧಿಸಿದಂತೆ ನಿಕಟ ಸಂಪರ್ಕ ಹೊಂದಿರುವ ಪ್ರದೇಶ. ಇದನ್ನು ಜಿಲ್ಲೆಯ ಪರ್ಯಾಯ ಕೇಂದ್ರವೆಂದೇ ಕರೆಯಲಾಗುತ್ತಿದೆ. ಜಿಲ್ಲಾ ಕೇಂದ್ರವಾಗಲು ಹಾತೋರೆಯುತ್ತಿದೆ. 
ಚಿಕ್ಕಪಡಸಲಗಿಯಲ್ಲಿ ರೈತರೇ ನಿರ್ಮಿಸಿರುವ ಬ್ಯಾರೇಜ್‌ನಿಂದಾಗಿ ಇಡೀ ರಾಷ್ಟ್ರದಲ್ಲೇ ಮಾದರಿ ಬ್ಯಾರೇಜ್ ಎನ್ನುವ ಗೌರವಕ್ಕೆ ಪಾತ್ರವಾಗಿದೆ. ಕೃಷಿ, ವಾಣಿಜ್ಯ ಮತ್ತು ಕೈಗಾರಿಕೆ ಕ್ಷೇತ್ರಗಳಲ್ಲಿ ಇಷ್ಟೊಂದು ಹೆಸರು ಮಾಡಿರುವ ಈ ಮೂರು ಪ್ರದೇಶಗಳಲ್ಲೂ ಇಂದು ಕೊರೋನಾ ತೀವ್ರತೆ ಹೆಚ್ಚಾಗುತ್ತಿದೆ. 

ಆಲಮಟ್ಟಿ ಹಿನ್ನೀರಿನಿಂದ ಮುಳುಗಡೆ ಆಗಲಿರುವ ಬಾಗಲಕೋಟೆ ಹಳೆಪಟ್ಟಣಕ್ಕೆ ಒಕ್ಕರಿಸಿರುವ ಕರೋನಾದಿಂದಾಗಿ ಇಡೀ ಪಟ್ಟಣ ಇಂದು ನಲುಗಿ ಹೋಗಿದೆ. ಕಳೆದೊಂದು ತಿಂಗಳಿನಿಂದ ಇಲ್ಲಿ ೧೩ ಕೇಸ್‌ಗಳು ಪತ್ತೆಯಾಗಿವೆ. ಮೊದಲ ಕೇಸ್ ಪತ್ತೆ ಆಗುತ್ತಿದ್ದಂತೆ ಇಡೀ ಪ್ರದೇಶವನ್ನು ನಿರ್ಬಂದಿತ ಪ್ರದೇಶವೆಂದು ಘೋಷಿಸಿ, ಈ ಪ್ರದೇಶದ ಎಲ್ಲ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಜನ ಸಂಚಾರ ನಿಷೇಧಿಸಲಾಗಿದೆ. ಆದಾಗ್ಯೂ ಹೊಸ ಕೇಸ್‌ಗಳು ಪತ್ತೆ ಆಗುತ್ತಲೇ ಇವೆ. ಜನ ಕೂಡ ಸರ್ಕಾರದ ನಿರ್ಧಾರಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎನ್ನುವುದು ದುರದೃಷ್ಟಕರ ಸಂಗತಿ.

ನಗರದ ಆಯಕಟ್ಟಿನ ಪ್ರದೇಶ, ವಾಣಿಜ್ಯ, ವ್ಯವಹಾರಗಳ ಕೇಂದ್ರ ಬಂದ್ ಆಗಿ ತಿಂಗಳಾಗುತ್ತ ಬಂದಿದೆ. ಅದರ ಪರಿಣಾಮ ಇಡೀ ನಗರದ ಮೇಲೆ ಆಗಿದೆ. ಜನತೆ ದಿನಸಿಗಳ ಕೊರತೆ ಎದುರಿಸುವಂತಾಗಿದೆ. ದಿನಸಿಗಳಿಲ್ಲದೆ ಅದೆಷ್ಟೊ ಅಂಗಡಿಗಳು ನಗರದ ಇತರ ಭಾಗಗಳಲ್ಲಿ ಬಂದ್ ಆಗಿವೆ. ಕಳೆದ ನಾಲ್ಕೆದು ವರ್ಷಗಳಿಂದ ಉಚ್ರಾಯ ಸ್ಥಿತಿಗೆ ತಲುಪಿದ್ದ ವಾಣಿಜ್ಯ ಚಟುವಟಿಕೆ ಕೊರೋನಾದಿಂದಾಗಿ ಹಳಿ ತಪ್ಪಿದಂತಾಗಿದೆ.

ಮುಧೋಳ ನಗರದ ಸ್ಥಿತಿಯೂ ಭಿನ್ನವಾಗಿಲ್ಲ. ಅಲ್ಲಿಯೂ ಐದು ಪಾಸಿಟಿವ್ ಕೇಸ್‌ಗಳು ಪತ್ತೆ ಆಗಿದ್ದರಿಂದ ವಾಣಿಜ್ಯ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಾರಂಭಿಸಿದೆ. ಕೊರೋನಾ ತಡೆಗಾಗಿ ಎಷ್ಟೆ ಬಿಗಿ ಕ್ರಮಗಳನ್ನು ಕೈಗೊಂಡು ತೀವ್ರ ನಿಗಾ ವಹಿಸಿದ್ದರೂ ಪಾಸಿಟಿವ್ ಕೇಸ್‌ಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎನ್ನುವ ಆತಂಕ ಕಾಡುತ್ತಲೇ ಇದೆ.

ಬಾಗಲಕೋಟೆ, ಮುಧೋಳ ಜತೆಗೆ ಜಮಖಂಡಿಯಲ್ಲೂ ಒಂದು ಪಾಸಿಟಿವ್ ಕೇಸ್ ಪತ್ತೆ ಆಗಿದ್ದು, ಅದು ಕೂಡ ತಲ್ಲಣಗೊಂಡಿದೆ. ಹೀಗೆ ಜಿಲ್ಲೆಯ ಪ್ರಮುಖ ನಗರಗಳನ್ನು ಕೊರೋನಾ ತನ್ನ ಅಡ್ಡಾ ಮಾಡಿಕೊಳ್ಳುತ್ತಿರುವುದು ಜನತೆಯಲ್ಲಿ ಮತ್ತಷ್ಟು ಭಯ ಆವರಿಸಿಕೊಳ್ಳಲಾರಂಭಿಸಿದೆ. ಆದರೆ ಜನತೆ ಭಯ ಬಿಟ್ಟು, ತಾವೇ ಇದರ ಕಡಿವಾಣಕ್ಕೆ ಮುಂದಾಗಬೇಕಿದೆ. ಜಿಲ್ಲಾಡಳಿತ ಕೈಗೊಳ್ಳುವ ಕ್ರಮಗಳ ಅನುಷ್ಠಾನಕ್ಕೆ ಸಾಥ್ ನೀಡಬೇಕಿದೆ. ಅದು ಬಿಟ್ಟು ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಬೇಕಾ ಬಿಟ್ಟಿ ಓಡಾಡುವುದು. ನಿಯಮಗಳನ್ನು ಉಲ್ಲಂಘಿಸುವುದು ಮಾಡಿದಲ್ಲಿ ಕರೋನಾ ಅಟ್ಟಹಾಸಕ್ಕೆ ನಾವುಗಳೇ ದಾರಿ ಮಾಡಿಕೊಟ್ಟಂತಾಗಲಿದೆ.

ಜನತೆ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರುವುದು, ಮಾಸ್ಕ್ಗಳನ್ನು ಧರಿಸದೇ ಅಡ್ಡಾಡುವುದು, ಅನಗತ್ಯವಾಗಿ ವಾಹನಗಳ ಓಡಾಟ ಮುಂದುವರಿಸಿದಲ್ಲಿ ಮಹಾಮಾರಿಗೆ ರತ್ನಗಂಬಳಿ ಹಾಸಿ ಸ್ವಾಗತ ನೀಡಿದಂತಾಗಲಿದೆ. ಜಿಲ್ಲಾದ್ಯಂತ ವ್ಯಾಪಿಸುತ್ತಿರುವ ಕೊರೋನಾ ತಡೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮತ್ತು ಜನಜಾಗೃತಿಗಳಷ್ಟೇ ಸದ್ಯ ನಮ್ಮೆಲ್ಲರ ಮುಂದೆ ಇರುವ ಮಾರ್ಗಗಳು ಎನ್ನುವುದು ಅರಿತುಕೊಳ್ಳಬೇಕಿದೆ. ಜಿಲ್ಲಾಡಳಿ ಕೂಡ ಇವುಗಳನ್ನು ಪಾಲಿಸುವಂತೆ ಎಷ್ಟೆ ಮನವಿ ಮಾಡಿಕೊಳ್ಳುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಇನ್ನೂ ಎಚ್ಚರಗೊಳ್ಳದಿದ್ದಲ್ಲಿ ಕಟ್ಟು ನಿಟ್ಟಿನಿಟ್ಟಿನ ಕ್ರಮಗಳು ಜಿಲ್ಲಾಡಳಿತಕ್ಕೆ ಅನಿವಾರ್ಯವಾಗಲಿವೆ.
-ವಿಠ್ಠಲ ಆರ್. ಬಲಕುಂದಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT