ರಾಜ್ಯ

ಕೊರೋನಾ ವಿರುದ್ಧ ದಿಟ್ಟ ಹೋರಾಟ: 3 ದಿನಗಳಿಂದ ನಗರದಲ್ಲಿ ಯಾವುದೇ ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ!

Manjula VN

ಬೆಂಗಳೂರು: ಕೊರೋನಾ ಹಾಟ್'ಸ್ಪಾಟ್ ಲಿಸ್ಟ್ ನಲ್ಲಿ ಸ್ಥಾನ ಪಡೆದಿದ್ದ ಬೆಂಗಳೂರು ನಗರದಲ್ಲಿ ವೈರಸ್ ವಿರುದ್ಧ ದಿಟ್ಟ ಹೋರಾಟ ಮುಂದುವರೆದಿದ್ದು, ಕಳೆದ ಮೂರು ದಿನಗಳಿಂದ ಯಾವುದೇ ಹೊಸ ಪ್ರಕರಣಗಳೂ ದಾಖಲಾಗಿಲ್ಲ ಎಂದು ವರದಿಗಳಿಂದ ತಿಳಿದುಬಂದಿದೆ. 
    
ನಗದಲ್ಲಿ ಒಟ್ಟು 89 ಮಂದಿಯಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಲಾಕ್'ಡೌನ್'ನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ಇದರ ಪರಿಣಾಮ ರಾಜ್ಯದ ವಿವಿಧ ಭಾಗಗಳಲ್ಲಿ ಮಂಗಳವಾರ 37 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ನಗರದಲ್ಲಿ ಮಾತ್ರ ಭಾನುವಾರ, ಸೋಮವಾರ ಮತ್ತು ಮಂಗಳವಾರ ಯಾವುದೇ ರೀತಿಯ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. 

ರಾಜ್ಯದಲ್ಲಿ ಈ ವರೆಗೂ ಸೋಂಕಿತರ ಸಂಖ್ಯೆ 418ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಶನಿವಾರ 41 ಮಂದಿಯಲ್ಲಿ ಹಾಗೂ ಮಂಗಳವಾರ 37 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದರಲ್ಲಿ ನಿನ್ನೆ ಒಂದೇ ದಿನ ನಾಲ್ಕು ಮಂದಿ ವೈರಸ್'ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 

ಕೊರೋನಾ ವಿರುದ್ಧ ಬೆಂಗಳೂರು ದಿಟ್ಟ ಹೋರಾಟ ನಡೆಸುತ್ತಿದೆ. ಕಳೆದ ಐದು ದಿನಗಳಿಂದ ಜಿಲ್ಲಾ ಮಟ್ಟದಲ್ಲೂ ಉತ್ತಮ ಬೆಳವಣಿಗೆಗಳು ಕಂಡು ಬಂದಿವೆ ಎಂದು ತಜ್ಞರು ಹೇಳಿದ್ದಾರೆ. 

 ಬಿಬಿಎಂಪಿ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಶೇ.0.6ರಷ್ಟು ಮಾತ್ರ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಇತರೆ ಜಿಲ್ಲೆಗಳಾದ ವಿಜಯಪುರದಲ್ಲಿ ಶೇ.11.8, ಕಲಬುರಗಿಯಲ್ಲಿ ಶೇ.6.4, ಗದಗ ಶೇ.5.9, ಬಾಗಲಕೋಟೆ ಶೇ.5.6 ರಷ್ಟು ಕಂಡು ಬಂದಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. 
 

SCROLL FOR NEXT