ರಾಜ್ಯ

ಭದ್ರತಾ ಆತಂಕ: ಝೂಮ್ ಆ್ಯಪ್ ಬಳಕೆ ಕೈ ಬಿಟ್ಟ ಕರ್ನಾಟಕ ಆರೋಗ್ಯ ಸಚಿವಾಲಯ

Srinivasamurthy VN

ಬೆಂಗಳೂರು: ಚೀನಾ ಮೂಲದ ಖ್ಯಾತ ಕಾನ್ಫರೆನ್ಸ್ ಆ್ಯಪ್ 'ಝೂಮ್' ಕುರಿತಂತೆ ಗಂಭೀರ ಸ್ವರೂಪದ ಭದ್ರತಾ ಆತಂಕ ವ್ಯಕ್ತವಾದ ಬೆನ್ನಲ್ಲೇ ಕರ್ನಾಟಕ ಆರೋಗ್ಯ ಸಚಿವಾಲಯ ಈ ಆ್ಯಪ್ ಬಳಕೆಯನ್ನು ಕೈ ಬಿಟ್ಟಿದೆ.

ಕೊರೊನಾ ವೈರಸ್‌ ಹಾವಳಿಯಿಂದ ಲಾಕ್‌ಡೌನ ವ್ಯವಸ್ಥೆ ಜಾರಿಯಲ್ಲಿದೆ. ಈ ನಿಟ್ಟಿನಲ್ಲಿ ಐಟಿ ಕಂಪನಿಗಳು ಸೇರಿದಂತೆ ಅನೇಕ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಸೂಚಿಸಿವೆ. ಹಾಗೆಯೇ ಹಲವು ಶಿಕ್ಷಣ ಸಂಸ್ಥೆಗಳು ಆನ್‌ಲೈನ್‌ ಮೂಲಕ ತರಗತಿಗಳನ್ನು  ನಡೆಸುತ್ತಿದ್ದಾವೆ. ಹೀಗಾಗಿ ಸದ್ಯ ವಿಡಿಯೊ ಕಾನ್ಫರೆನ್ಸ್‌ ಆಪ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಈ ಪೈಕಿ ಚೀನಾ ಮೂಲದ ಝೂಮ್ ಆ್ಯಪ್ ಬಳಕೆದಾರರ ಮನಗೆದ್ದಿತ್ತು. ಆದರೆ ಝೂಮ್ ಆ್ಯಪ್ ಆಪ್‌ ಸುರಕ್ಷಿತವಲ್ಲ ಎಂದು ಕೇಂದ್ರ ಸರ್ಕಾರ ಹೇಳಿದ್ದು, ಈ ಆಪ್ ಬಳಸದಂತೆ ಕೇಂದ್ರ ಸರ್ಕಾರ  ಹಾಗೂ ತಂತ್ರಜ್ಞಾನ ಪರಿಣಿತರು ಹೇಳಿದ್ದಾರೆ. 

ಇದೇ ಕಾರಣಕ್ಕೆ ಇದೀಗ ಕರ್ನಾಟಕ ಆರೋಗ್ಯ ಸಚಿವಾಲಯ ಕೂಡ ಇದೀಗ ಝೂಮ್ ಆ್ಯಪ್ ಬಳಕೆ ಕೈ ಬಿಟ್ಟಿದೆ. ಈ ಬಗ್ಗೆ ಅಧಿಕತ ಹೇಳಿಕೆ ಬಿಡುಗಡೆ ಮಾಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಸಿಕ್ಸೋ ವೆಬೆಕ್ಸ್ (Cisco Webex) ಆ್ಯಪ್ ಬಳಸುತ್ತಿರುವುದಾಗಿ  ಹೇಳಿದೆ. 

ಈ ಹಿಂದೆ ದೇಶದ ಪ್ರಮುಖ ಟೆಕ್ ಸಂಸ್ಥೆ ಇನ್ಫೋಸಿಸ್ ಕೂಡ ತನ್ನ ಆರ್ಥಿಕ ವರ್ಷದ ಕ್ಯೂ4 ವರದಿ ಮಂಡನೆಗೆ ಇದೇ ಸಿಕ್ಸೋ ವೆಬೆಕ್ಸ್ (Cisco Webex) ಆ್ಯಪ್ ಬಳಕೆ ಮಾಡಿತ್ತು. ಇದಲ್ಲದೆ ದೇಶದಲ್ಲಿ ಹೆಚ್ಚಾಗಿ ಗೂಗಲ್ ಮೀಟ್ ಆ್ಯಪ್ ಅನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿದ್ದು, ಲಾಕ್  ಡೌನ್ ಸಂದರ್ಭದಲ್ಲಿ ದೇಶದಲ್ಲಿ ಸುಮಾರು 2 ಮಿಲಿಯನ್ ಹೊಸ ಬಳಕೆದಾರರು ಈ ಗೂಗಲ್ ಮೀಟ್ ಆ್ಯಪ್ ಬಳಕೆ ಮಾಡುತ್ತಿದ್ದಾರೆ. ಈ ಆ್ಯಪ್ ನಲ್ಲಿ ಜಿಮೇಲ್, ಡಾಕ್ಯುಮೆಂಟ್ಸ್, ಶೀಟ್ಸ್, ಕ್ಯಾಲೆಂಡರ್ ಮತ್ತು ಇತರೆ ಆ್ಯಪ್ ಗಳ ಏಕಕಾಲದ ಬಳಕೆಗೆ ಅವಕಾಶವಿದೆ. 

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗೂಗಲ್ ಕ್ಲೌಡ್ ಸಂಸ್ಥೆಯ ಏಷ್ಯಾ ಪೆಸಿಫಿಕ್ ವಿಭಾಗದ ಭದ್ರತಾ ಮುಖ್ಯಸ್ಥ ಮತ್ತು ನೆಟ್‌ವರ್ಕಿಂಗ್ ಮತ್ತು ಸಹಯೋಗ ತಜ್ಞರು ಮಾರ್ಕ್ ಜಾನ್ಸ್ ಟನ್ ಮಾತನಾಡಿದ್ದು, ಜಿ-ಮೀಟ್ ಅತ್ಯಂತ ಸುರಕ್ಷಿತ ಆ್ಯಪ್ ಆಗಿದ್ದು, ಭದ್ರತೆಗೆ ಹೆಚ್ಚು ಒತ್ತು ನೀಡಲಾಗಿದೆ  ಎಂದು ಹೇಳಿದ್ದಾರೆ.

SCROLL FOR NEXT