ರಾಜ್ಯ

ಪಾದರಾಯನಪುರದಲ್ಲಿ ಇಬ್ಬರಲ್ಲಿ ಕೊರೋನಾ: ರಾಮನಗರಕ್ಕೂ ಕಾಲಿಟ್ಟ ವೈರಸ್!

Manjula VN

ಬೆಂಗಳೂರು: ಕ್ವಾರಂಟೈನ್ ಮಾಡುವ ವೇಳೆ ಇಲ್ಲಿನ ಪಾದರಾಯನಪುರದಲ್ಲಿ ಗಲಭೆ ಸೃಷ್ಟಿಸಿ, ರಾಮನಗರ ಜೈಲಿನಲ್ಲಿ ಬಂಧಿಯಾಗಿರುವ 54 ಆರೋಪಿಗಳ ಪೈಕಿ ಇಬ್ಬರಿಗೆ ಕೊರೋನಾ ಸೋಂಕು ಗುರುವಾರ ದೃಢಪಟ್ಟಿದೆ. ಹೀಗಾಗಿ ಅವರನ್ನು ಕೂಡಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಈ ಆರೋಪಿಗಳನ್ನು ಈ ವರೆಗೂ ಸೋಂಕು ರಹಿತವಾಗಿದ್ದ ರಾಮನಗರಕ್ಕೆ ಕರೆತರಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಂಸದ ಡಿಕೆ ಸುರೇಶ್ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಇಬ್ಬರು ಆರೋಪಿಗಳಿಗೆ ಕೊರೋನಾ ಕಾಣಿಸಿರುವುದು ಜೈಲಿನ ಸಿಬ್ಬಂದಿ ಹಾಗೂ ಸೋಂಕು ಮುಕ್ತ ರಾಮನಗರ ಜನರಿಗೆ ಆತಂಕ ಸೃಷ್ಟಿಸಿದೆ. ಇಬ್ಬರಿಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜೈಲಿನಲ್ಲಿ ಸಿಬ್ಬಂದಿಯನ್ನು ಕ್ವಾರಂಟೈನ್ ನಲ್ಲಿಡಲಾಗಿದೆ. ಸಿಬ್ಬಂದಿಯ ರಕ್ತ ಮತ್ತು ಸ್ಕ್ಯಾಬ್ ಮಾದರಿ ಪರೀಕ್ಷೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. 

ಇದೇ ವೇಳೆ ಸೋಂಕಿತ ಇಬ್ಬರನನು ರಾಮನಗರದಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ತಡರಾತ್ರಿ ಸ್ಥಳಾಂತರಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಮುಂದುವರೆಸಲಾಗಿದೆ. ಎಂದು ಮೂಲಗಳು ತಿಳಿಸಿವೆ. 

ಪಾದರಾಯನಪುರದಲ್ಲಿ ಸೋಂಕು ಶಂಕಿತರನ್ನು ಕ್ವಾರಂಟೈನ್ ನಲ್ಲಿಡಲು ಏ.19ರಂದು ಆರೋಗ್ಯ ಇಲಾಖೆ, ಪೊಲೀಸರು ಮತ್ತು ಬಿಬಿಎಂಪಿ ಸಿಬ್ಬಂದಿ ತೆರಳಿದ್ದರು. ಈವೇಳೆ ಹಲವು ನೂರಾರು ಮಂದಿ ದಾಳಿ ನಡೆಸಿ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದರು. ಮೇಜು, ಕುರ್ಜಿ, ಪೆಂಡಾಲ್, ಚೆಕ್ ಪೋಸ್ಟ್ ಸೇರಿದಂತೆ ಸರ್ಕಾರದ ಆಸ್ತಿ ಪಾಸ್ತಿ ನಾಶಪಡಿಸಿ ಆತಂಕ ವಾತಾವರಣ ಸೃಷ್ಟಿಸಿದ್ದರು. 

SCROLL FOR NEXT