ರಾಜ್ಯ

ಪಾದರಾಯನಪುರ ಗಲಾಟೆ: ಆರೋಪಿಗಳಿಗೆ ಐಷರಾಮಿ ಹೋಟೆಲ್ ಕ್ವಾರಂಟೈನ್ ಸರಿಯಲ್ಲ- ಎಸ್. ಆರ್. ವಿಶ್ವನಾಥ್ ಕಿಡಿ

Nagaraja AB

ಯಲಹಂಕ: ದೇಶದಲ್ಲಿ ಅರ್ಧಭಾಗಕ್ಕೆ  ಕೊರೋನಾ ವೈರಸ್ ಹರಡಿಸಿದ ತಬ್ಲೀಘಿಗಳು  ದೇಶದ್ರೋಹಿಗಳು. ಅವರೊಂದಿಗೆ ಸಂಪರ್ಕ ಹೊಂದಿದವರಿಗೆ ಯಾವುದೇ ರೀತಿಯ ವೈಭೋಗದ ಸೌಲಭ್ಯಗಳನ್ನು ನೀಡಬಾರದೆಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಕಿಡಿಕಾರಿದ್ದಾರೆ

ಯಲಹಂಕದ ಅಳ್ಳಾಳಸಂದ್ರದಲ್ಲಿರುವ ರಾಯಲ್ ಆರ್ಕಿಡ್ ಹೋಟೇಲ್ ಮುಂದೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾದರಾಯನಪುರದ ಗಲಾಟೆ ಪ್ರಕರಣದ ಆರೋಪಿಗಳನ್ನು ರಾಯಲ್ ಆರ್ಕಿಡ್ ಹೋಟೇಲ್ ನಲ್ಲಿಟ್ಟಿರುವುದು ಸರಿಯಲ್ಲ. ತಬ್ಲೀಘಿಗಳಿಗೆ ಯಲಹಂಕ ಕ್ಷೇತ್ರದಲ್ಲಿರಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ.ಇವರಿಗೆ ಮಸೀದಿಗಳಲ್ಲಿ ರಕ್ಷಣೆ ಕೊಡುತ್ತಿದ್ದವರು ಈಗ ಮಸೀದಿಗಳಲ್ಲೇ ಹೋಂ ಕ್ವಾರೆಂಟೈನ್ ನಲ್ಲಿಟ್ಟುಕೊಳ್ಳಲಿ ಎಂದರು.

ಯಲಹಂಕ ಕ್ಷೇತ್ರದ ಜನತೆ ಲಾಕ್ ಡೌನ್ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿರುವಾಗ ಈ ತಬ್ಲೀಘಿಗಳಿಂದ ಕೊರೋನಾ ವೈರಸ್ ಸೋಂಕು ಹರಡಿದರೆ ಇಷ್ಟು ದಿನಗಳ ಶ್ರಮ ವ್ಯರ್ಥವಾಗುತ್ತದೆ. ಜನವಸತಿ ಪ್ರದೇಶದಲ್ಲಿ ಹೋಂ ಕ್ವಾರೆಂಟೈನ್ ಮಾಡಿದರೆ ಅದರಿಂದಾಗುವ ಅನಾಹುತ ಊಹಿಸಲೂ ಸಾಧ್ಯವಿಲ್ಲ. ಬಿಬಿಎಂಪಿ ಅಧಿಕಾರಿಗಳು ಮತ್ತು ಕೆಲ ಹಿರಿಯ ಅಧಿಕಾರಿಗಳು ತೆಗೆದುಕೊಂಡಿರುವ ಈ ನಿರ್ಧಾರದಿಂದಾಗಿ ಕ್ಷೇತ್ರದ ಜನತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ರಾಯಲ್ ಆರ್ಕಿಡ್ ಹೋಟೆಲ್ ಮ್ಯಾನೇಜ್ ಮೆಂಟ್ ಕೂಡ ಹಣದ ದುರಾಸೆಗೆ ಬಿದ್ದು ತಬ್ಲೀಘಿಗಳಿಗೆ ಹೋಂ ಕ್ವಾರೆಂಟೈನ್ ನಲ್ಲಿಡಲು ಅವಕಾಶ ಮಾಡಿಕೊಟ್ಟಿರುವುದು ಸರಿಯಲ್ಲ ಎಂದರು. ತಬ್ಲೀಘಿಗಳನ್ನು ಹೋಟೇಲ್ ನಲ್ಲಿಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ಸಾವಿರಾರು ಜನ ಹೊಟೇಲ್ ಮುಂದೆ ಜಮಾಯಿಸಿ ಶಾಸಕರ ನೇತೃತ್ವದಲ್ಲಿ ಪ್ರತಿಭಟಿಸಿದರು. ಸ್ಥಳೀಯರ ವಿರೋಧಕ್ಕೆ ಮಣಿದ ಅಧಿಕಾರಿಗಳು ಇವರನ್ನು ಬೇರೆಡೆಗೆ ಸ್ಥಳಾಂತರಿಸಿದರು.

SCROLL FOR NEXT