ಮೇ.3ರ ನಂತರ ಕರ್ನಾಟಕದಲ್ಲಿ ಲಾಕ್ ಡೌನ್ ವಿಸ್ತರಣೆಯೇ, ಸಡಿಲಿಕೆಯೇ?: ಕೇಂದ್ರದ ನಿರ್ಧಾರ ಪಾಲನೆಗೆ ರಾಜ್ಯ ಒಲವು
ಕೊರೋನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆಯಾದ ನಂತರ ಸಾವು-ನೋವು ನಿಯಂತ್ರಣಕ್ಕೆ ಬಂದಿರುವುದರಿಂದ ಕೆಲವು ರಾಜ್ಯಗಳು ಮೇ 3ರ ನಂತರವೂ ಲಾಕ್ ಡೌನ್ ವಿಸ್ತರಣೆಗೆ ಒಲವು ವ್ಯಕ್ತಪಡಿಸಿದ್ದರೆ ಕರ್ನಾಟಕದಲ್ಲಿ ವಿಸ್ತರಣೆಗೆ ಒಲವು ಇದ್ದಂತೆ ಕಂಡುಬರುತ್ತಿಲ್ಲ.
ಬೆಂಗಳೂರು:ಕೊರೋನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆಯಾದ ನಂತರ ಸಾವು-ನೋವು ನಿಯಂತ್ರಣಕ್ಕೆ ಬಂದಿರುವುದರಿಂದ ಕೆಲವು ರಾಜ್ಯಗಳು ಮೇ 3ರ ನಂತರವೂ ಲಾಕ್ ಡೌನ್ ವಿಸ್ತರಣೆಗೆ ಒಲವು ವ್ಯಕ್ತಪಡಿಸಿದ್ದರೆ ಕರ್ನಾಟಕದಲ್ಲಿ ವಿಸ್ತರಣೆಗೆ ಒಲವು ಇದ್ದಂತೆ ಕಂಡುಬರುತ್ತಿಲ್ಲ.
ಈಗಾಗಲೇ 9 ಜಿಲ್ಲೆಗಳ ಗ್ರಾಮೀಣ ಕೈಗಾರಿಕೆಗಳಿಗೆ ವಿನಾಯ್ತಿ ನೀಡಿರುವ ರಾಜ್ಯ ಸರ್ಕಾರ ಮೇ 3ರ ನಂತರ ಹಂತ ಹಂತವಾಗಿ ಲಾಕ್ ಡೌನ್ ನ್ನು ಸಡಿಲಗೊಳಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎನ್ನಲಾಗುತ್ತಿದೆ.
ಕೋವಿಡ್ 19 ಬಂದ ನಂತರ ಲಾಕ್ ಡೌನ್ ಘೋಷಣೆಯಾಗಿ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿರುವುದರಿಂದ ಅದರ ಪುನಶ್ಚೇತನಕ್ಕೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು ಸಾಮಾಜಿಕ ಅಂತರ, ಸಾಕಷ್ಟು ಮುಂಜಾಗ್ರತೆ ನೋಡಿಕೊಂಡು ಮತ್ತೆ ಚಟುವಟಿಕೆಗಳ ಪುನರಾರಂಭಕ್ಕೆ ಗಮನ ಹರಿಸುತ್ತಿದೆ ಎನ್ನಲಾಗಿದೆ.
ಇಂದು ಬೆಳಗ್ಗೆ ಪ್ರಧಾನಿ ಮೋದಿಯವರೊಂದಿಗೆ ನಡೆಸುವ ವಿಡಿಯೊ ಸಂವಾದದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜ್ಯದ ಸ್ಥಿತಿಗತಿ ಮತ್ತು ಜನರ, ಸರ್ಕಾರದ ತಜ್ಞರು, ಅಧಿಕಾರಿಗಳ ಸಲಹೆ, ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ. ಮೇ 3ರ ನಂತರ ಕರ್ನಾಟಕದಲ್ಲಿ ಲಾಕ್ ಡೌನ್ ವಿಸ್ತರಿಸುವುದೇ ಅಥವಾ ಸಡಿಲಿಸುವುದೇ ಎಂಬ ಬಗ್ಗೆ ಕೇಂದ್ರ ಸರ್ಕಾರದ ವಿವೇಚನೆ ನಿರ್ಧಾರಕ್ಕೆ ಬಿಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ.