ಬೆಂಗಳೂರು: ಮಾರಕ ಕೊರೋನಾ ವೈರಸ್ ಕಾರ್ಯ ನಿರತ ಪತ್ರಕರ್ತರನ್ನೂ ಕಾಡುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ನಡೆಸಿದ್ದ ಪತ್ರಕರ್ತರ ಬೃಹತ್ ಕೋವಿಡ್-19 ಪರೀಕ್ಷೆಯ ವರದಿ ಇದೀಗ ಲಭ್ಯವಾಗಿದ್ದು, ಪರೀಕ್ಷೆಗೆ ಒಳಗಾಗಿದ್ದ ಬೆಂಗಳೂರಿನ 400ಕ್ಕೂ ಅಧಿಕ ಪತ್ರಕರ್ತರಿಗೆ ಕೊರೋನಾ ವೈರಸ್ ನೆಗೆಟಿವ್ ಎಂದು ಬಂದಿದೆ.
ಹೌದು.. ಇದೇ ಏಪ್ರಿಲ್ 22ರಂದು ಮುಖ್ಯಮಂತ್ರಿಯವರ ಸೂಚನೆಯ ಮೇರೆಗೆ ರಾಜ್ಯದ ರಾಜಧಾನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮದವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋವಿಡ್-19 ಪರೀಕ್ಷಾ ಅಭಿಯಾನ ನಡೆಸಿತ್ತು. ಈ ತಪಾಸಣಾ ಶಿಬಿರದಲ್ಲಿ ವಿದ್ಯುನ್ಮಾನ ಮಾಧ್ಯಮದ 120 ಪ್ರತಿನಿಧಿಗಳು ಸೇರಿದಂತೆ ಒಟ್ಟಾರೆ 409 ಪತ್ರಕರ್ತರು ಪಾಲ್ಗೊಂಡಿದ್ದರು. ಇದೀಗ ಇವರೆಲ್ಲರ ವೈದ್ಯಕೀಯ ವರದಿ ಬಂದಿದ್ದು, 409 ಪತ್ರಕರ್ತರ ಪೈಕಿ 408 ಮಂದಿಯ ವೈದ್ಯಕೀಯ ವರದಿ ನೆಗೆಟಿವ್ ಎಂದು ಬಂದಿದೆ. ಓರ್ವ ಪತ್ರಕರ್ತರಲ್ಲಿ ಮಾತ್ರ ಕೊರೋನಾ ವೈರಸ್ ಪಾಸಿಟಿವ್ ದೃಢವಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ರಾಜ್ಯದ ಮಾಹಿತಿ ಮತ್ತು ವಾರ್ತಾ ಇಲಾಖೆಯ ಜಂಟಿ ನಿರ್ದೇಶ ಡಿಪಿ ಮುರಳೀಧರ್ ಅವರು ಮಾಹಿತಿ ನೀಡಿದ್ದು, ಸೋಮವಾರ ತಪಾಸಣೆ ಮಾಡಿಸಿಕೊಂಡಿದ್ದ 409 ಪತ್ರಕರ್ತರ ಪೈಕಿ 408 ಮಂದಿಯ ವರದಿ ನೆಗೆಟಿವ್ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಒಟ್ಟಾರೆ ಈ ಶಿಬಿರದಲ್ಲಿ 1,170 ಮಂದಿ ಪತ್ರಕರ್ತರು ತಪಾಸಣೆ ಮಾಡಿಸಿಕೊಂಡಿದ್ದರು ಎನ್ನಲಾಗಿದೆ.
ಏಪ್ರಿಲ್ 22ರಿಂದ ಮೂರು ದಿನಗಳ ಕಾಲ ವಾರ್ತಾ ಇಲಾಖೆ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಇಂದಿರಾ ನಗರದ ಸರ್ ಸಿ ವಿ ರಾಮನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್-19 ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.