ರಾಜ್ಯ

ಗುರು ರಾಘವೇಂದ್ರ ಕೋ-ಆಪ್ ಬ್ಯಾಂಕ್ ವಂಚನೆ: ಸಿಐಡಿ ಪೊಲೀಸರಿಂದ ಬೆಂಗಳೂರಿನ 15 ಸ್ಥಳಗಳಲ್ಲಿ ಶೋಧ

Raghavendra Adiga

ಬೆಂಗಳೂರು: ಗುರು ರಾಘವೇಂದ್ರ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನಲ್ಲಿ ನಡೆದ ಕೋಟ್ಯಂತರ ರು.  ಹಗರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 4 ರ ಮಂಗಳವಾರ ಅಪರಾಧ ತನಿಖಾ ವಿಭಾಗದ (ಸಿಐಡಿ) ಸಿಬ್ಬಂದಿ ನಗರದ 15 ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.

ನಕಲಿ ದಾಖಲೆಗಳ ಆಧಾರದ ಮೇಲೆ ಈ ಬ್ಯಾಂಕಿನಿಂದ ಭಾರಿ ಸಾಲ ಪಡೆದ ಮತ್ತು ನಂತರ ಮರುಪಾವತಿ ಮಾಡುವಲ್ಲಿ ವಿಳಂಬ ಮಾಡಿದ್ದ ಜನರ ವಿರುದ್ಧ ಪೋಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಸಿಐಡಿಯ ಆರ್ಥಿಕ ಅಪರಾಧ ವಿಭಾಗಕ್ಕೆ ಸೇರಿದ ಹಲವಾರು ತಂಡಗಳು ಹಲಸೂರು, ರಾಜಾಜಿನಗರ, ಸದಾಶಿವನಗರ, ಜಯನಗರ ಮುಂತಾದ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದವು.  ಬ್ಯಾಂಕಿನ ಸಾಲವನ್ನು ಮರುಪಾವತಿಸದೆ ಮೋಸ ಮಾಡಿದ ಜನರ ಮನೆಗಳನ್ನು ಅಧಿಕಾರಿಗಳು  ಶೋಧಿಸುತ್ತಿದ್ದಾರೆ. 

ನೂರಾರು ಕೋಟಿ ರೂಪಾಯಿಗಳ ವಂಚನೆ ಬೆಳಕಿಗೆ ಬಂದ ನಂತರ, ಬ್ಯಾಂಕಿನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಾಸುದೇವ ಮಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ನಂತರ ಹೈಕೋರ್ಟ್ ವಂಚನೆ ಪ್ರಕರಣವನ್ನು ಸಿಐಡಿ ತನಿಖೆ ನಡೆಸುವಂತೆ ಆದೇಶಿಸಿತ್ತು. ಹಗರಣ ಮತ್ತು ಮಯ್ಯ ಆತ್ಮಹತ್ಯೆ ಪ್ರಕರಣಗಳನ್ನು ಸಿಐಡಿ ತನಿಖೆನಡೆಸುತ್ತಿದೆ.

 ಒಂದು ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚುವಂಚನೆ ಹಗರಣ ಇದಾಗಿದೆ ಎಂದು  ಹೇಳಲಾಗುತ್ತದೆ. ಈ ವರ್ಷದ ಜನವರಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕಿನ ಕಾರ್ಯಾಚರಣೆಗಳಿಗೆ ನಿರ್ಬಂಧ ಹೇರಿದ ನಂತರ ಅಕ್ರಮಗಳು ಬೆಳಕಿಗೆ ಬಂದವು. ಕೆಲವು ಅಧಿಕಾರಿಗಳು ನಕಲಿ ಠೇವಣಿಗಳನ್ನು ರಕ್ಷಣೆ ಮಾಡಿದ್ದಾರೆ ಮತ್ತು ದೊಡ್ಡ ಪ್ರಮಾಣದ ಅಕ್ರಮಗಳಲ್ಲಿ ತೊಡಗಿದ್ದಾರೆ ಎಂದು ಕಂಡುಬಂದಿದೆ. ವಾಸುದೇವ ಮಯ್ಯ  ಕೂಡ ಆರೋಪಗಳನ್ನು ಎದುರಿಸುತ್ತಿದ್ದರು ಆದರೆ ಜುಲೈ  7 ರಂದು ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.  ತನ್ನ ಸಾವಿನ  ಮುನ್ನ ಬರೆದ ಡೆತ್ ನೋಟ್ ನಲ್ಲಿ ಮಯ್ಯ ಯಾವುದೇ ಆರೋಪವನ್ನುನಿರಾಕರಿಸಿದ್ದಲ್ಲದೆ ತನ್ನ ಮಾಜಿ ಸಹೋದ್ಯೋಗಿಗಳು ಈ ಹಗರಣ ನಡೆಸಿದ್ದರೆಂದು ದೂಷಿಸಿದ್ದಾರೆ. 

SCROLL FOR NEXT