ರಾಜ್ಯ

ಶಿರಾ ಶಾಸಕ, ಮಾಜಿ ಸಚಿವ ಬಿ.ಸತ್ಯನಾರಾಯಣ ನಿಧನ

Srinivas Rao BV

ತುಮಕೂರು: ಶಿರಾ ಜೆಡಿಎಸ್​ ಶಾಸಕ, ಮಾಜಿ ಸಚಿವ ಬಿ.ಸತ್ಯನಾರಾಯಣ (67) ಮಂಗಳವಾರ ನಿಧನರಾದರು. 

ನ್ಯುಮೋನಿಯಾದಿಂದ ಬಳಲುತಿದ್ದ ಅವರು  ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ಮಧ್ಯಾಹ್ನವೇ ಸತ್ಯನಾರಾಯಣ ಸಾವಿನ ಬಗ್ಗೆ ವದಂತಿ ಹರಿದಾಡಿತ್ತು, ಗಣ್ಯರು ಸಂತಾಪ ಸೂಚಿಸಿದ್ದರಾದರೂ ರಾತ್ರಿ 10.45ರ ವೇಳೆಗೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಮೂಲ ಖಚಿತಪಡಿಸಿದೆ. 

ವೃತ್ತಿಯಲ್ಲಿ ವಕೀಲರಾಗಿದ್ದ ಅವರು 1996ರಲ್ಲಿ ಜನತಾದಳದಿಂದ ಮೊದಲ ಬಾರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಶೀಲರಾದ ಬಿ.ಸತ್ಯನಾರಾಯಣ ಅಂದು ಜೆ.ಎಚ್.ಪಟೇಲರ ಸಂಪುಟದಲ್ಲಿ ಕಾರ್ಮಿಕ ಸಚಿವರಾಗಿದ್ದರು. ಜತೆಗೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಆಗಿದ್ದರು. 

1999 ರ ಚುನಾವಣೆಯಲ್ಲಿ ಸೋತ ಸತ್ಯನಾರಾಯಣ 2004 ರಲ್ಲಿ ಮತ್ತೆ ವಿಧಾನಸಭೆ ಪ್ರವೇಶಿಸಿದರು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಧರ್ಮಸಿಂಗ್ ಸಂಪುಟದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. 2008, 2013ರ ಚುನಾವಣೆಯಲ್ಲಿ ಸತತ ಸೋಲು ಕಂಡಿದ್ದರು. 2018 ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಗೊಂಡಿದ್ದರು. ಪತ್ನಿ ಅಮ್ಮಾಜಮ್ಮ, ಪುತ್ರ ಎಸ್.ಪ್ರಕಾಶ್ ಹಾಗೂ 4 ಹೆಣ್ಣುಮಕ್ಕಳನ್ನು ಶಾಸಕರು ಅಗಲಿದ್ದಾರೆ. ಬುಧವಾರ ಶಿರಾ ತಾಲೂಕು ಬೂವನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಬೆಳಗ್ಗೆ ತುಮಕೂರಿನ ಜಿಲ್ಲಾ ಜೆಡಿಎಸ್ ಕಚೇರಿ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ‌ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

SCROLL FOR NEXT