ರಾಜ್ಯ

ಸ್ಯಾನಿಟೈಸರ್, ಎನ್-95 ಮಾಸ್ಕ್ ಅಗತ್ಯವಸ್ತುಗಳ ಪಟ್ಟಿಯಲ್ಲಿ ಏಕಿಲ್ಲ: ಹೈಕೋರ್ಟ್

Nagaraja AB

ಬೆಂಗಳೂರು: ಸ್ಯಾನಿಟೈಸರ್, ಎನ್-95 ಮಾಸ್ಕ್ ಗಳನ್ನು ಅಗತ್ಯವಸ್ತುಗಳ ಪಟ್ಟಿಯಿಂದ ತೆಗೆದು ಹಾಕಿರುವುದಕ್ಕೆ ಸಂಬಂಧಿಸಿದಂತೆ ಕೇಂದ್ರಸರ್ಕಾರ ಅಫಿಡವಿಟ್ ಸಲ್ಲಿಸಿ ವಿವರಣೆ ನೀಡುವಂತೆ ಹೈಕೋರ್ಟ್ ಗುರುವಾರ ಆದೇಶಿಸಿದೆ.

ಸ್ಯಾನಿಟೈಸರ್ ಮತ್ತು ಎನ್-95 ಮಾಸ್ಕ್ ಗಳನ್ನು ವೈದ್ಯರು ಮಾತ್ರ ಬಳಸುತ್ತಿಲ್ಲ. ಜುಲೈ 1ರಿಂದ ಅಗತ್ಯ ವಸ್ತುಗಳ ಪಟ್ಟಿಯಿಂದ ಇವುಗಳನ್ನು ತೆಗೆದುಹಾಕಿರುವ ಸಂಬಂಧ ಕೇಂದ್ರ ಸರ್ಕಾರದ ಸಮರ್ಥ ಅಧಿಕಾರಿಯೊಬ್ಬರು  ಅಫಿಡವಿಟ್ ನ್ನು ಸಲ್ಲಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಾಧೀಶ ಅರವಿಂದ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ತೀರ್ಪನ್ನು ಪ್ರಕಟಿಸಿದೆ.

ಸ್ಯಾನಿಟೈಸರ್ ಮತ್ತು ಎನ್-95 ಮಾಸ್ಕ್ ಗಳ ಲಭ್ಯತೆ ಮತ್ತು ಬೆಲೆಗಳಿಗೆ ಸಂಬಂಧಿಸಿದಂತೆ ರಾಜ್ಯಗಳಿಂದ ಪ್ರತಿಕೂಲ ವರದಿ ಬಂದಿಲ್ಲ ಎಂಬ ಕೇಂದ್ರಸರ್ಕಾರದ ನಿಲುವನ್ನು ಉಲ್ಲೇಖಿಸಿದ ನ್ಯಾಯಾಲಯ,ಕೇಂದ್ರ ಸರ್ಕಾರ ಪ್ರಜ್ಞಾಪೂರ್ವಕ ನಿರ್ಧಾರ ಕೈಗೊಂಡಿದೆ. ಆದರೆ, ಜುಲೈ 1ರ ನಂತರ ಪರಿಸ್ಥಿತಿಯಲ್ಲಿ ತೀವ್ರ ರೀತಿಯ ಬದಲಾವಣೆಯಾಗಿದೆ. ಆಗಿನಿದಂಲೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಅದರೊಂದಿಗೆ ಸ್ಯಾನಿಟೈಸರ್ ಮತ್ತು ಎನ್-95 ಮಾಸ್ಕ್ ಗಳ ಬಳಕೆ ಕೂಡಾ ಹೆಚ್ಚಾಗುತ್ತಲೇ ಇದೆ ಎಂದು ಹೇಳಿತು.

ರಾಜ್ಯಸರ್ಕಾರ ಕೂಡಾ  ಎನ್ -95 ಮಾಸ್ಕ್ ಗಳು ಮತ್ತು ಸ್ಯಾನಿಟೈಸರ್ ಲಭ್ಯತೆ, ತಯಾರಿಕೆ ಆಧಾರದ ಮೇಲೆ  ಬೆಲೆಯಲ್ಲಿನ ವ್ಯತ್ಯಾಸ, ಕೊರೋನಾ ವಾರಿಯರ್ಸ್ ಗಾಗಿ ಸರ್ಕಾರ ಖರೀದಿಸಿರುವ ಎನ್-95 ಮಾಸ್ಕ್ ಗಳ ಒಟ್ಟಾರೇ ಪಾವತಿ ಬಗ್ಗೆ ಅಫಿಡವಿಟ್ ಸಲ್ಲಿಸಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಆಗಸ್ಟ್ 17ರೊಳಗೆ ಅಫಿಡವಿಟ್ ಸಲ್ಲಿಸಬೇಕೆಂದು ವಿಭಾಗೀಯ ಪೀಠ ಸೂಚಿಸಿದೆ.

SCROLL FOR NEXT