ರಾಜ್ಯ

ಕಾರ್ಮಿಕ ಸಂಘಟನೆಗಳಿಂದ 'ಭಾರತ ರಕ್ಷಿಸಿ' ಹೋರಾಟ: ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ

Nagaraja AB

ಬೆಂಗಳೂರು: ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾನೂನು ರದ್ದು ಮಾಡಿರುವ ಕೇಂದ್ರ ಸರ್ಕಾರ ಕೃಷಿ ಮತ್ತು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ದೇಶಾದ್ಯಂತ ಸುಮಾರು 200ಕ್ಕೂ ಹೆಚ್ಚು ಸಂಘಟನೆಗಳು ಇಂದು "ಭಾರತ ರಕ್ಷಿಸಿ" ಚಳವಳಿ ಆರಂಭಿಸಿವೆ.

ಅಖಿಲ ಭಾರತ ಕಿಸಾನ್ ಮಹಾಸಭಾ, ಸಿಐಟಿಯು ಸೇರಿದಂತೆ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಚಳವಳಿಯಲ್ಲಿ ಭಾಗವಹಿಸಿವೆ. ದೇಶಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಇಂದು ಬೆಳಗ್ಗೆ ಪ್ರತಿಭಟನೆ ನಡೆಸಲಾಗಿದ್ದು, ಹಲವೆಡೆ, ಬೈಕ್ ರಾಲಿ, ಪ್ರತಿಭಟನಾ ಮೆರವಣಿಗೆ, ಧರಣಿಯ ಮೂಲಕ ವಿವಿಧ ಸಂಘಟನೆಗಳು ಚಳವಳಿ ನಡೆಸಿವೆ. 

ಎಡಪಕ್ಷಗಳು ಮತ್ತು ಕಾಂಗ್ರೆಸ್ ಪಕ್ಷ ಚಳವಳಿಗೆ ಬೆಂಬಲ ವ್ಯಕ್ತ ಪಡಿಸಿವೆ. ಕಾಂಗ್ರೆಸ್‍ನ ಕಾರ್ಮಿಕ ಘಟಕ ಪ್ರತಿಭಟನೆಯಲ್ಲಿ ಭಾಗವಹಿಸಿತ್ತು. ಬೆಂಗಳೂರಿನಲ್ಲಿ ವಿವಿಧ ಸಂಘಟನೆಗಳು ರೈಲ್ವೆ ನಿಲ್ದಾಣದಿಂದ ಮೆರವಣಿಗೆ ನಡೆಸಿದವು. ಕೆಪಿಸಿಸಿಯ ಕಾರ್ಮಿಕ ವಿಭಾಗದ ಮುಖಂಡರು, ಕಾರ್ಯಕರ್ತರು ಪಕ್ಷದ ಕಚೇರಿಯಿಂದ ಮೆರವಣಿಗೆಯ ಮೂಲಕ ಬಂದು ಫ್ರೀಡಂ ಪಾರ್ಕ್‍ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಸಲೀಂ ಅಹಮದ್,ಕಾರ್ಮಿಕ ವಿಭಾಗದ ಮುಖಂಡ ಎಸ್‌.ಎಸ್.ಪ್ರಕಾಶಂ ಸೇರಿ ಅನೇಕ ಮುಂಖಡರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.

ಡಿ.ಕೆ.ಶಿವಕುಮಾರ್ ಮಾತನಾಡಿ, ಸರ್ಕಾರ ಆರೋಗ್ಯಕರ ಸರ್ಕಾರ ಇರಬೇಕಾದರೆ ಎಲ್ಲಾ ವರ್ಗಗಳು ಸಮಾನವಾಗಿ ಇರಬೇಕು. 20 ಲಕ್ಷ ಕೋಟಿ ರೂ. ರೈತರಿಗೆ ಕೊಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ಒಬ್ಬ ರೈತನಿಗೂ ಹಣ ಸಿಕ್ಕಿಲ್ಲ. ಕೊಟ್ಟ ಮಾತಿನಂತೆ ಕೇಂದ್ರ ಸರ್ಕಾರ ನಡೆದುಕೊಳ್ಳಬೇಕು. ಪಕ್ಷಭೇದ ಮರೆತು ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದರೂ ಚರ್ಚೆ ಇಲ್ಲದೆ ಏಕಾಏಕಿ ಜನವಿರೋಧಿ ಕಾಯ್ದೆಗಳನ್ನು ತರಲಾಗುತ್ತಿದೆ. ಕಾರ್ಮಿಕರ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡಲಿದೆ ಎಂದು ಹೇಳಿದರು.

ಕೊರೊನಾದಿಂದಾಗಿ ಕಳೆದ ಐದು ತಿಂಗಳಿನಿಂದ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದಿರಲಿಲ್ಲ. ಪ್ರತಿಭಟನೆಯ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಷ್ಟವಾಗಲಿದೆ. ಜನ ಗುಂಪು ಸೇರಿದರೆ ಕೊರೊನಾ ಸೋಂಕು ಹೆಚ್ಚಾಗಲಿದೆ ಎಂಬ ಕಾರಣಕ್ಕೆ ಪೊಲೀಸರು ಪ್ರತಿಭಟನೆಗಳಿಗೆ ಅನುಮತಿ ನೀಡಿರಲಿಲ್ಲ.

SCROLL FOR NEXT