ಪ್ರವಾಹ: ನಾಲ್ಕು ಸಾವಿರ ಕೋಟಿ ರೂ.ಗಳ ವಿಶೇಷ ಆರ್ಥಿಕ ನೆರವು ಒದಗಿಸಲು ಕೇಂದ್ರಕ್ಕೆ ಮನವಿ
ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಪ್ರವಾಹ ಪರಿಸ್ಥಿತಿಯ ಕುರಿತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಪ್ರವಾಹ ಪರಿಸ್ಥಿತಿಯ ಕುರಿತು ಮಾಹಿತಿ ಒದಗಿಸಿದರು. ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದು ಎಂದು ಪ್ರಧಾನಿ ಮಂತ್ರಿಗಳು ಭರವಸೆ ನೀಡಿದರು.
ಪ್ರವಾಹದಲ್ಲಿ ಮೃತಪಟ್ಟವರಿಗೆ ತೀವ್ರಸಂತಾಪ ವ್ಯಕ್ತಪಡಿಸಿ, ಜನಜಾನುವಾರುಗಳ ರಕ್ಷಣೆ ನಮ್ಮ ಆದ್ಯತೆ ಎಂದು ತಿಳಿಸಿದರು.
- ಕರ್ನಾಟಕ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸಲು ನಾಲ್ಕು ಸಾವಿರ ಕೋಟಿ ರೂ.ಗಳ ವಿಶೇಷ ಆರ್ಥಿಕ ನೆರವನ್ನು ಒದಗಿಸಲು ಕೋರಲಾಯಿತು.
- ತಕ್ಷಣದ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಿಗೆ ಎಸ್.ಡಿ ಆರ್.ಎಫ್ ನ ಕಂತು . 395 ಕೋಟಿ ರೂ.ಗಳನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಕೋರಲಾಯಿತು.
- ಕರ್ನಾಟಕ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಯನ್ನು ನಿರ್ವಹಿಸಲು ಈಗಾಗಲೇ ತರಬೇತಿ ಪಡೆದ 200 ಎಸ್.ಡಿ.ಆರ್.ಎಫ್ ಸಿಬ್ಬಂದಿ , ನಾಲ್ಕು ಎನ್.ಡಿ.ಆರ್.ಎಫ್ ತಂಡಗಳು ಹಾಗೂ ನಾಲ್ಕು ರಕ್ಷಣಾ ಹೆಲಿಕಾಪ್ಟರ್ ಗಳನ್ನು ಒದಗಿಸಲಾಗಿದ್ದು, ಹೆಚ್ಚುವರಿಯಾಗಿ 4 ಎನ್.ಡಿ.ಆರ್.ಎಫ್ ತಂಡಗಳನ್ನು ಕಳುಹಿಸಲು ಕೋರಲಾಯಿತು.
- ದೀರ್ಘಾವಧಿ ಪರಿಹಾರವಾಗಿ ಕಾವೇರಿ ಹಾಗೂ ಕೃಷ್ಣಾ ನದಿ ಪಾತ್ರಗಳಲ್ಲಿ ಹಾಗೂ ಪಶ್ಚಿಮ ಘಟ್ಟಗಳು ವ್ಯಾಪಿಸಿರುವ ನೆರೆ ರಾಜ್ಯಗಳಲ್ಲಿ ಭೂ-ಕುಸಿತಕ್ಕೆ ಸಂಬಂಧಿಸಿದಂತೆ ಮ್ಯಾಪಿಂಗ್ ಹಾಗೂ ಮುನ್ಸೂಚನಾ ವ್ಯವಸ್ಥೆಯನ್ನು ಸ್ಥಾಪಿಸುವ ಕುರಿತು ಕೇಂದ್ರ ಭೂ ವಿಜ್ಞಾನ ಸರ್ವೇಕ್ಷಣಾ ಇಲಾಖೆಯ ವತಿಯಿಂದ ಅಧ್ಯಯನ ಕೈಗೊಳ್ಳುವಂತೆ ಮನವಿ ಮಾಡಲಾಯಿತು.
- ಕೇಂದ್ರ ಜಲ ಆಯೋಗದ ವತಿಯಿಂದ ಕೃಷಾ ನದಿ ಪಾತ್ರದಲ್ಲಿ ಸಮಗ್ರ ಪ್ರವಾಹ ಪರಿಸ್ಥಿತಿ ಮುನ್ಸೂಚನೆ ವ್ಯವಸ್ಥೆಯನ್ನು ಸ್ಥಾಪಿಸಲು ಕೋರಲಾಯಿತು.
- ಕಡಲು ಕೊರೆತ ನಿಯಂತ್ರಣಕ್ಕೆ National Cyclone Mitigation Relief Project ಯೋಜನೆಯಡಿ ಕಡಲು ಕೊರೆತವನ್ನು ಸೇರ್ಪಡೆ ಗೊಳಿಸಲು ಹಾಗೂ ಅದಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಲಾಯಿತು.
- ಪ್ರಸ್ತುತ ರಾಜ್ಯದಲ್ಲಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಾದ ಬೆಳಗಾವಿ, ರಾಯಚೂರು ಸೇರಿದಂತೆ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳಲ್ಲಿ ಸತತ ಮಳೆಯಿಂದಾಗಿ 56 ತಾಲ್ಲೂಕುಗಳ 885 ಗ್ರಾಮಗಳು ಹಾನಿಗೊಳಗಾಗಿದೆ. ಪ್ರಾಥಮಿಕ ವರದಿಯ ಪ್ರಕಾರ ಮೂರು ಸಾವಿರ ಮನೆಗಳು, ಎಂಭತ್ತು ಸಾವಿರ ಹೆಕ್ಟೇರ್ ಪ್ರದೇಶದ ಕೃಷಿ, ತೋಟಗಾರಿಕೆ ಬೆಳೆಗಳು, 3500 ಕಿ.ಮಿ ರಸ್ತೆ, 104 ಸಣ್ಣ ನೀರಾವರಿ ಕೆರೆಗಳು, ವಿದ್ಯುತ್ ಪರಿವರ್ತಕಗಳು, 394 ಕಟ್ಟಡಗಳಿಗೆ ಹಾಗೂ ಇನ್ನಿತರೆ ಮೂಲಭೂತ ಸೌಕರ್ಯಗಳಿಗೆ ಹಾನಿ ಉಂಟಾಗಿದೆ.
ಕಂದಾಯ ಸಚಿವ ಆರ್.ಅಶೋಕ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos