ರಾಜ್ಯ

ಕೊರೋನಾ ವೈರಸ್: ಬೆಂಗಳೂರು ಆಸ್ಪತ್ರೆಗಳ ಹೊರೆ ತಗ್ಗಿಸಿದ ಕೋವಿಡ್ ಕೇರ್ ಕೇಂದ್ರಗಳು!

Srinivasamurthy VN

ಬೆಂಗಳೂರು: ಮಾರಕ ಕೊರೋನಾ ಸಾಂಕ್ರಾಮಿಕದಿಂದಾಗಿ ತಲ್ಲಣಿಸಿದ್ದ ಬೆಂಗಳೂರು ಕ್ರಮೇಣ ಚೇತರಿಕೆ ಕಾಣುತ್ತಿದ್ದು, ಬೆಡ್ ಗಳ ಕೊರತೆ ಮತ್ತು ಸೂಕ್ತ ಚಿಕಿತ್ಸೆ ಸಿಗದ ಪರದಾಡುವ ರೋಗಿಗಳ ಸಂಖ್ಯೆ ಗಣನೀಯವಾಗಿ ತಗ್ಗಿದೆ.

ಹೌದು..ಕೋವಿಡ್ ಕೇರ್ ಕೇಂದ್ರಗಳಲ್ಲಿನ ಬೆಡ್ ಗಳ ಸಾಮರ್ಥ್ಯವನ್ನು ಹೆಚ್ಚಳ ಮಾಡುವ ಮೂಲಕ ರಾಜ್ಯ ಸರ್ಕಾರ ಬೆಂಗಳೂರಿನ ಕೋವಿಡ್-19 ಆಸ್ಪತ್ರೆಗಳ ಮೇಲಿನ ಭಾರಿ ಒತ್ತಡವನ್ನು ಕಡಿಮೆ ಮಾಡಿದೆ. ಬೆಂಗಳೂರಿನಲ್ಲಿ ನಿತ್ಯ ಸರಾಸರಿ 2 ಸಾವಿರ ಹೊಸ ಸೋಂಕು ಪ್ರಕರಣಗಳು ದಾಖಲಾಗುತ್ತಿದ್ದು, ಇದು ಈ  ಹೀಂದೆ ಆಸ್ಪತ್ರೆಗಳ ಮೇಲಿನ ಒತ್ತಡ ಹೆಚ್ಚಾಗುವಂತೆ ಮಾಡಿತ್ತು. ಆದರೆ ಸರ್ಕಾರ ಸಿಲಿಕಾನ್ ಸಿಟಿಯಲ್ಲಿನ 11 ಕೋವಿಡ್ ಕೇರ್ ಕೇಂದ್ರಗಳ ಬೆಡ್ ಗಳ ಸಂಖ್ಯೆಯನ್ನು ಹೆಚ್ಚಳ ಮಾಡಿ ಅಲ್ಲಿ ಲಕ್ಷಣ ರಹಿತ ಸೋಂಕಿತರಿಗೆ ಚಿಕಿತ್ಸೆ ನೀಡಲು ಆರಂಭಿಸಿದೆ. ಈ ಬೆಳವಣಿಗೆ ಬಳಿಕ ನಗರದಲ್ಲಿನ ಆಸ್ಪತ್ರೆಗಳಲ್ಲಿನ ಒತ್ತಡ  ಕಡಿಮೆಯಾಗಿದೆ.

ಬೆಂಗಳೂರಿನ 11 ಕೋವಿಡ್ ಕೇರ್ ಕೇಂದ್ರಗಳಲ್ಲಿ ಒಟ್ಟಾರೆ 4,276 ಬೆಡ್ ಗಳಿದ್ದು, ಈ ಪೈಕಿ ಈ ವರೆಗೂ 3,480 ಬೆಡ್ ಗಳನ್ನು ರೋಗಿಗಳಿಗೆ ನೀಡಲಾಗಿದೆ, ಸೋಮವಾರ ಮತ್ತೆ 310 ಮಂದಿ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಆ ಮೂಲಕ ಕೋವಿಡ್ ಕೇರ್ ಕೇಂದ್ರಗಳಲ್ಲಿನ ಖಾಲಿ ಹಾಸಿಗೆಗಳ  ಪ್ರಮಾಣ 18.67ಕ್ಕೆ ಏರಿಕೆಯಾಗಿದೆ. ಬೆಂಗಳೂರಿನ ಒಟ್ಟಾರೆ ಕೊರೋನಾ ಸೋಂಕಿತರ ಪೈಕಿ ಲಕ್ಷಣಗಳಿಲ್ಲದ ಸೋಂಕಿತರ ಪ್ರಮಾಣ ಶೇ.83ರಷ್ಟಿದ್ದು, ಲಕ್ಷಣಗಳಿರುವ ಸೋಂಕಿತರ ಪ್ರಮಾಣ ಕೇವಲ ಶೇ.17ರಷ್ಟಿದೆ. ಸೋಂಕು ಲಕ್ಷಣಗಳಿರುವ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೋವಿಡ್ ಕೇರ್ ಕೇಂದ್ರಗಳ ಟಾಸ್ಕ್ ಫೋರ್ಸ್ ಮುಖ್ಯಸ್ಥ ರಾಜೇಂದ್ರ ಕುಮಾರ್ ಕಠಾರಿಯಾ ಅವರು, ಪ್ರತಿದಿನ ಶೇ.23ರಷ್ಟು ರೋಗ ಲಕ್ಷಣಗಳಿಲ್ಲದ ಸೋಂಕಿತರು ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲಾಗುತ್ತಿದ್ದಾರೆ. ಅಂತೆಯೇ ನಿತ್ಯ ಸರಾಸರಿ 350 ರೋಗಿಗಳು ಇಲ್ಲಿಂದ್ ಡಿಸ್ಜಾರ್ಜ್  ಆಗುತ್ತಿದ್ದಾರೆ. ಇದು ಆಸ್ಪತ್ರೆಗಳ ಮೇಲಿನ ಒತ್ತಡವನ್ನು ಇಳಿಕೆ ಮಾಡಿದೆ. ಕೋವಿಡ್ ಕೇರ್ ಕೇಂದ್ರಗಳಲ್ಲಿ ಸಾಕಷ್ಟು ನರ್ಸ್ ಗಳು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಿದ್ದಾರೆ ಎಂದು ಹೇಳಿದರು.

ಸಿಸಿಸಿ ಟಾಸ್ಕ್ ಫೋರ್ಸ್ ನ ಬಿಬಿಎಂಪಿ ವಿಶೇಷ ಆಯುಕ್ತ ಸರ್ಫಾರಾಜ್ ಖಾನ್ ಅವರು, ಕೋವಿಡ್ ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾಕಷ್ಟು ಆಮ್ಲಜನಕ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ(BIEC)ದಲ್ಲಿ ನಿರ್ಮಾಣ ಮಾಡಲಾಗಿರುವ ಕೋವಿಡ್ ಕೇರ್ ಕೇಂದ್ರಗಳಲ್ಲಿ  10,500 ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ. ಅಂತೆಯೇ 1500 ಬೆಡ್ ಗಳ ಪೈಕಿ 939 ಬೆಡ್ ಗಳು ಭರ್ತಿಯಾಗಿವೆ. ಅಂತೆಯೇ ಇನ್ನೂ 4 ಸಾವಿರ ಬೆಡ್ ಗಳನ್ನು ಮುಂದಿನಗಳಲ್ಲಿ ಸಿದ್ಧಪಡಿಸಲಾಗುತ್ತಿದ್ದು, ಇದಲ್ಲದೆ ಮತ್ತೆ 4 ಸಾವಿರ ಬೆಡ್ ಗಳು ತಯಾರಾಗಲಿವೆ, ಒಂದು ವೇಳೆ ಸೋಂಕಿತರ ಸಂಖ್ಯೆ ಹೆಚ್ಚಳವಾದರೆ ಈ  ಬೆಡ್ ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಪ್ರಸ್ತುತ ನಮಗೆ ಒಂದಷ್ಟು ಸಿಬ್ಬಂದಿಗಳ ಕೊರತೆ ಇದ್ದು, ಶೀಘ್ರದಲ್ಲೇ ಅದನ್ನೂ ಕೂಡ ಭರ್ತಿ ಮಾಡುತ್ತೇವೆ ಎಂದು ಹೇಳಿದ್ದಾರೆ.

SCROLL FOR NEXT