ರಾಜ್ಯ

ಬೆಂಗಳೂರು: ವಿಮಾನ ನಿಲ್ದಾಣದಿಂದ ಲೋಕೋ ಪೈಲಟ್ ಅಪಹರಣ, ದರೋಡೆ

Manjula VN

ಬೆಂಗಳೂರು: ಬೆಂಗಳೂರು ರೈಲ್ವೇ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲೋಕೋ ಪೈಲಟ್ ಒಬ್ಬರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನದಿಂದ ಅಪಹರಣ ಮಾಡಿ, ದರೋಡೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ. 

ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಸೋನು ಕುಮಾರ್ ಸಿಂಗ್ ಅಪಹರಣಕ್ಕೊಳಗಾದ ವ್ಯಕ್ತಿಯಾಗಿದ್ದಾರೆ. ಮಂಗಳವಾರ ಬೆಳಗಿನ ಜಾವ 1.20ರ ಸುಮಾರಿಗೆ ಪಾಟ್ನದಿಂದ ಸಿಂಗ್ ಅವರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಬಳಿಕ ಕೆಆರ್.ಪುರಂಗೆ ತೆರಳಲು ಕ್ಯಾಬ್ ವೊಂದನ್ನು ಬುಕ್ ಮಾಡಿಕೊಂಡಿದ್ದರು. 

ಇದರಂತೆ ಕಾರನ್ನು ಹತ್ತಿದ್ದ ಸಿಂಗ್ ಅವರನ್ನು ಚಾಲಕ 2 ಕಿಮೀ ವರೆಗೂ ಕರೆದುಕೊಂಡು ಹೋಗಿ, ಟೀ ಕುಡಿಯಬೇಕೆಂದು ಕಾರು ನಿಲ್ಲಿಸಿದ್ದಾನೆ. ಬಳಿಕ ಮತ್ತೊಬ್ಬ ವ್ಯಕ್ತಿ ಕಾರು ಹತ್ತಿದ್ದಾನೆ. ಇದಕ್ಕೆ ಸಿಂಗ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ಚಾಲಕ ಅವರ ಮನವೊಲಿಸಿದ್ದಾನೆ. ಬಳಿಕ ಇಬ್ಬರೂ ವ್ಯಕ್ತಿಗಳು ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಯಲ್ಲಿ ಮಾತನಾಡಿಕೊಂಡಿದ್ದಾರೆ. ಬಳಿಕ ಕಾರು ನಿಲ್ಲಿಸಿ ಸಿಂಗ್ ಅವರ ಕೈಕಾಲುಗಳನ್ನು ಬಟ್ಟೆಯಿಂದ ಕಟ್ಟಿದ್ದಾರೆ. ಬಳಿಕ ತುಮಕೂರಿಗೆ ಕರೆದುಕೊಂಡು ಹೋಗಿ ಅಲ್ಲಿ ಎಟಿಎಂ ಕಾರ್ಡ್ ತೆಗೆದುಕೊಂಡು ರೂ.20,000 ಡ್ರಾ ಮಾಡಿದ್ದಾರೆ. ಬಳಿಕ ಆ ಹಣವನ್ನು ಆಟೋ ಚಾಲಕನೊಬ್ಬನಿಗೆ ನೀಡಿದ್ದಾರೆಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಅಪಹರಣಕಾರುರು ಬಿಹಾರದಲ್ಲಿರುವ ನನ್ನ ಕುಟುಂಬಕ್ಕೆ ಕರೆ ಮಾಡಿ ರೂ.2 ಲಕ್ಷ ಗೂಗಲ್ ಪೇ ಮಾಡುವಂತೆ ತಿಳಿಸು ಎಂದು ಬಲವಂತ ಮಾಡಿದ್ದರು. ನನ್ನ ಕುಟುಂಬಸ್ಥರ ಬಳಿ ಹಣವಿಲ್ಲ ಎಂದು ನಾನು ಹೇಳಿದ್ದೆ. ಬಳಿಕ ಸ್ನೇಹಿತರಿಗೆ ಕರೆ ಮಾಡಿ ಖಾತೆ ಹಣ ಜಮಾ ಮಾಡುವಂತೆ ತಿಳಿಸಿದ್ದೆ. ಬಳಿಕ ರೂ.1 ಲಕ್ಷದವರೆಗೂ ಹಣವನ್ನು ಆರೋಪಿಗಳು ತಮ್ಮ ಖಾತೆಗೆ ಜಮಾ ಮಾಡಿಕೊಂಡರು. ಅಲ್ಲದೆ, ವೈಯಕ್ತಿಕ ಫೋನ್ ಹಾಗೂ ರೈಲ್ವೇ ಇಲಾಖೆ ನೀಡಿದ್ದ ಸಿಯುಜಿ ಫೋನ್ ಕೂಡ ಕಸಿದುಕೊಂಡರು ಎಂದು ಸಿಂಗ್ ಅವರು ಹೇಳಿದ್ದಾರೆ. 

ಅಪಹರಣಕಾರರು ಬಳಿಕ ಕಡೂರು ಬಳಿ ಕರೆದುಕೊಂಡು ಹೋಗಿದ್ದರು, ನನ್ನನ್ನು ಕಾರಿನಲ್ಲಿಯೇ ಬಿಟ್ಟು ಡಾಬಾ ವೊಂದರಲ್ಲಿ ಇಬ್ಬರು ಮದ್ಯಪಾನ ಮಾಡುತ್ತಿದ್ದರು. ಅಲ್ಲಿಂದ ನಾನು ತಪ್ಪಿಸಿಕೊಂಡು ದ್ವಿಚಕ್ರ ವಾಹನ ಸವಾರರೊಬ್ಬರ ಬಳಿ ಡ್ರಾಪ್ ಪಡೆದುಕೊಂಡು ಕಡೂರು ಪೊಲೀಸ್ ಠಾಣೆಗೆ ತೆರಳಿದ್ದೆ. ಬಳಿಕ ಬೆಂಗಳೂರಿಗೆ ಬಂದು ಪೊಲೀಸರಿಗೆ, ರೈಲ್ವೇ ಅಧಿಕಾರಿಗಳಿಗೆ ಮಾಹಿತಿ ನೀಡಿದೆ ಎಂದು ತಿಳಿಸಿದ್ದಾರೆ. 

ಇದೀಗ ಘಟನೆ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. 

SCROLL FOR NEXT