ರಾಜ್ಯ

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ: ಆಗಸ್ಟ್ 15ರವರೆಗೂ ಸೆಕ್ಷನ್ 144 ಜಾರಿ; 17 ಪ್ರಮುಖ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲು

Manjula VN

ಬೆಂಗಳೂರು: ನಗರದ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ಗಲಭೆ ನಡೆದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈಗಾಗಲೇ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಆಗಸ್ಟ್ 15ರ ಬೆಳಿಗ್ಗೆ 6 ಗಂಟೆಯವರೆಗೂ ಮುಂದುವರೆಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ತಿಳಿಸಿದ್ದಾರೆ. 

ಸೆಕ್ಷನ್ 144 ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪುಗೂಡುವಂತಿಲ್ಲ ಎಂದು ತಿಳಿಸಿದ್ದಾರೆ. 

ಈ ನಡುವೆ ಗಲಭೆಯಲ್ಲಿ ಪ್ರಮುಖ ಆರೋಪಿಗಳಾಗಿದ್ದಾರೆಂದು ಹೇಳಲಾಗುತ್ತಿರುವ 17 ಮಂದಿ ವಿರುದ್ಧ ನಗರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. 

ನಿನ್ನೆಯಷ್ಟೇ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ನಿಯಮಾವಳಿ ಪ್ರಕಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲು ತೀರ್ಮಾನಿಸಿದ್ದರು. ಅಲ್ಲದೆ, ಪ್ರಕರಣ ಸಂಬಂಧ ಈ ವರೆಗೂ 193 ಮಂದಿಯನ್ನು ಪೊಲೀಸರು ಬಂಧನಕ್ಕೊಳಪಡಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ತಿಳಿಸಿದ್ದಾರೆ. 

ಇಸ್ಲಾಂ ಧರ್ಮಗುರು ಮಹಮದ್ ಪೈಗಂಬರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳಕಾರಿ ಪೋಸ್ಟ್ ಮಾಡಲಾಗಿದೆ ಎಂದು ಮಂಗಳವಾರ ರಾತ್ರಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು.

ಪುಲಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಿವಾಸ, ಸುತ್ತಮುತ್ತಲಿನ ಮನೆಗಳು ಹಾಗೂ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಒಂದು ಕೋಮಿಗೆ ಸೇರಿದ ಉದ್ರಿಕ್ತ ಗುಂಪು ದಾಂಧಲೆ ನಡೆಸಿ, ಸಿಕ್ಕಸಿಕ್ಕ ವಾಹನಗಳು, ಮನೆ-ಮಳಿಗೆಗಳಿಗೆ ಬೆಂಕಿ ಹಚ್ಚಿದ್ದರು. ಶಾಸಕರ ನಿವಾಹ ಹಾಗೂ ಪಕ್ಕದ ಮನೆ ಭಸ್ಮವಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಈ ವೇಳೆ ಗುಂಡು ಹಾರಿಸಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಘಟನೆ ವೇಳೆ ನೂರಾರು ಸಂಖ್ಯೆಯಲ್ಲಿದ್ದ ಉದ್ರಿಕ್ತರ ಗುಂಪು ಮಾರಾಕಾಸ್ತ್ರಗಳನ್ನು ಹಿಡಿದು ಹಿಂಸಾಚಾರ ನಡೆಸಿದ್ದರು, ಅಲ್ಲದೆ, ಪಟಾಕಿಗಳನ್ನು ಸಿಡಿಸಿ ವಿಕೃತಿ ಮೆರೆದಿದ್ದರು.

SCROLL FOR NEXT