ಬೆಂಗಳೂರು: ರಾಜ್ಯದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವು ನದಿಗಳು ಉಕ್ಕಿ ಹರಿಯುತ್ತಿವೆ, ಇದರಿಂದಾಗಿ ಹಲವು ಹಳ್ಳಿಗಳು, ಸೇತುವೆಗಳು, ರಸ್ತೆಗಳು ಜಲಾವೃತವಾಗಿದ್ದು ಸಂಪರ್ಕ ಕಡಿದುಕೊಂಡಿವೆ.
ಮಹಾರಾಷ್ಟ್ರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಘಟಪ್ರಭ ನದಿ ನೀರು ತುಂಬಿಹೋಗಿ ಕೃಷ್ಣಾ ನದಿಗೆ ಮಹಾಪೂರವೇ ಹರಿದಿದೆ. ಇದರಿಂದ ಆಲಮಟ್ಟಿ ಜಲಾಶಯ ಬಹುತೇಕ ಭರ್ತಿಯಾಗಿದೆ. ಅಲ್ಲಿಂದ 2.5 ಲಕ್ಷ ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದ್ದು ಇದರಿಂದ ನಿಡಗುಂದಿ ತಾಲೂಕಿನ ಅರಳದಿನ್ನಿ, ಯಲಗೂರು, ಕಾಶಿನಕುಂಟೆ, ಬೂದಿಹಾಳ, ಮಸೂತಿ ಸೇರಿದಂತೆ ಹತ್ತಾರು ಗ್ರಾಮಗಳ ರೈತರ ಜಮೀನುಗಳಿಗೆ ಕೃಷ್ಣಾ ನದಿ ನೀರು ನುಗ್ಗಿ ನೂರಾರು ಎಕರೆ ಪ್ರದೇಶಗಳ ಬೆಳೆಯನ್ನ ನಾಶ ಮಾಡಿದೆ.
ಗದಗದಲ್ಲಿ ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನವಿಲು ತೀರ್ಥ ಜಲಾಶಯದಿಂದ ಅಪಾರ ಪ್ರಮಾಣದ ನೀರಿನ ಹೊರಹರಿವು ಇದೆ. ಇದರಿಂದ ಗದಗ ಜಿಲ್ಲೆಯ ನರಗುಂದ ಮತ್ತು ರೋಣ ತಾಲೂಕಿನ 20ಕ್ಕೂ ಹೆಚ್ಚು ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ. ಈಗಾಗಲೇ ಹಲವು ಗ್ರಾಮಗಳಲ್ಲಿ ಸೂರ್ಯಕಾಂತಿ, ಹೆಸರು, ಗೋವಿನ ಜೋಳ ಸೇರಿದಂತೆ ಹಲವು ಬೆಳೆ ನೀರು ಪಾಲಾಗಿದೆ. ನರಗುಂದ ತಾಲೂಕಿನ ಲಖಾಮಾಪೂರ ಗ್ರಾಮ ನಡುಗಡ್ಡೆಯಾಗಿದೆ. ಪ್ರವಾಹ ಪೀಡಿತ ಹಳ್ಳಿಗಳ ಜನರನ್ನು ಸುರಕ್ಷಿತವಾದ ಸ್ಥಳಕ್ಕೆ ತಲುಪಿಸುವಂತೆ ಸೂಚಿಸಲಾಗಿದೆ.
ಮಹಾರಾಷ್ಟ್ರದ ಪಶ್ಚಿಮಘಟ್ಟ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಳಗಾವಿ, ಧಾರವಾಡ, ಗದಗ, ರಾಯಚೂರು, ಬಳ್ಳಾರಿ, ಹಾವೇರಿ, ವಿಜಯಪುರ, ಯಾದಗಿರಿ, ಬಾಗಲಕೋಟೆ ಸೇರಿದಂತೆ 9 ಜಿಲ್ಲೆಗಳಲ್ಲಿ ಬಹುತೇಕ ಎಲ್ಲಾ ನದಿಗಳು, ಉಪ ನದಿಗಳು, ಹಳ್ಳಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕೃಷ್ಣಾ, ಘಟಪ್ರಭಾ, ದೂದ್‌ಗಂಗಾ, ವೇದ್‌ಗಂಗಾ ಹಾಗೂ ಹಿರಣ್ಯಕೇಶಿ ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.