

ಅಜ್ಮೀರ್: ಜೈಲು ಕೈದಿಗಳನ್ನು ಮನೆಗೆಲಸಕ್ಕೆ ಬಳಸಿಕೊಂಡು ಬಂಧನಕ್ಕೀಡಾಗಿದ್ದ ಮಹಿಳಾ ಜೈಲರ್ ಇದೀಗ ಅದೇ ಜೈಲಿನಲ್ಲಿ ಬಂಧಿಯಾಗಿರುವ ವಿಚಿತ್ರ ಘಟನೆ ರಾಜಸ್ತಾನದಲ್ಲಿ ನಡೆದಿದೆ.
ಹೌದು..ತನ್ನ ಇಬ್ಬರು ಹೆಣ್ಣುಮಕ್ಕಳ ಆರೈಕೆ ಹಾಗೂ ಮನೆಯ ಕೆಲಸಗಳಿಗಾಗಿ ಜೈಲಿನ ಇಬ್ಬರು ಮಹಿಳಾ ಕೈದಿಯರನ್ನು ಹೊರಗೆ ಕರೆದೊಯ್ಯಲು ಯತ್ನಿಸಿದ ಮಹಿಳಾ ಜೈಲರ್ ಈಗ ಅದೇ ಜೈಲು ಸೇರಿದ್ದಾರೆ.
ರಾಜಸ್ಥಾನದ ಅಜ್ಮೀರ್‌ನಲ್ಲಿ ನಡೆದಿರುವ ಈ ವಿಚಿತ್ರ ಪ್ರಕರಣದಲ್ಲಿ, ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ 37 ವರ್ಷದ ದಿವ್ಯಾ ಚೌಧರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಅವರು ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಅದೇ ಅಜ್ಮೀರ್ ಕೇಂದ್ರ ಕಾರಾಗೃಹದಲ್ಲಿ ಈಗ ಅವರನ್ನು ಇರಿಸಲಾಗಿದೆ.
ದಿವ್ಯಾ ಚೌಧರಿ ತಮ್ಮ ಪತಿಯಿಂದ ಪ್ರತ್ಯೇಕವಾಗಿ ಅಜ್ಮೀರ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅವರ ಪತಿ ಕೂಡ ಜೈಲರ್ ಆಗಿದ್ದು, ಕೋಟಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇಬ್ಬರು ಚಿಕ್ಕ ಹೆಣ್ಣುಮಕ್ಕಳ ಆರೈಕೆ ಹಾಗೂ ಮನೆ ಮತ್ತು ಕಚೇರಿಯ ಕೆಲಸಗಳನ್ನು ನಿಭಾಯಿಸಲು ಕಷ್ಟವಾಗುತ್ತಿದ್ದ ಹಿನ್ನೆಲೆಯಲ್ಲಿ, ಜೈಲಿನಲ್ಲಿದ್ದ ಮಹಿಳಾ ಕೈದಿಯರ ನೆರವು ಪಡೆಯಲು ದಿವ್ಯಾ ನಿರ್ಧರಿಸಿದ್ದರು ಎನ್ನಲಾಗಿದೆ.
ಇಬ್ಬರು ಕೈದಿಯರನ್ನು ಹೊರಗೆ ಕರೆದೊಯ್ಯಲು ಯತ್ನ
ಜುಲೈ 12ರಂದು ದಿವ್ಯಾ ಚೌಧರಿ, ತಮ್ಮ ಸಹೋದ್ಯೋಗಿ ಹಾಗೂ ಸ್ನೇಹಿತೆ ಎನ್ನಲಾದ ಪೊಲೀಸ್ ಕಾನ್‌ಸ್ಟೆಬಲ್ ಸೋನಿಯಾ ಚೌಧರಿ ಜೊತೆ ಸೇರಿ ಇಬ್ಬರು ಮಹಿಳಾ ಕೈದಿಯರನ್ನು ಜೈಲಿನಿಂದ ಹೊರಗೆ ಕರೆದೊಯ್ಯಲು ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕಿರಣ್ ಅಲಿಯಾಸ್ ಸೇಥಾ ಹಾಗೂ ವಿಚಾರಣಾಧೀನ ಕೈದಿ ಸನಾ ಅವರನ್ನು ದಿವ್ಯಾ ಮನೆಗೆಲಸಕ್ಕಾಗಿ ಕರೆದೊಯ್ಯಲು ಮುಂದಾಗಿದ್ದರು ಎನ್ನಲಾಗಿದೆ. ಆದರೆ, ಮಹಿಳಾ ಜೈಲಿನ ಮುಖ್ಯ ಗೇಟ್‌ನಲ್ಲಿದ್ದ ಇತರ ಸಿಬ್ಬಂದಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಸಿಬ್ಬಂದಿಯ ಆಕ್ಷೇಪದ ನಡುವೆಯೂ ದಿವ್ಯಾ ಮತ್ತು ಸೋನಿಯಾ ಅವರನ್ನು ಬೆದರಿಸಿ ಕೈದಿಯರನ್ನು ಹೊರಗೆ ಕರೆದೊಯ್ಯಲು ಪ್ರಯತ್ನಿಸಿದರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಈ ಘಟನೆಯ ಬಳಿಕ ಇಬ್ಬರು ಕೈದಿಯರು ಸುಮಾರು ಒಂದು ಅಥವಾ ಎರಡು ಗಂಟೆಗಳ ಕಾಲ ಮಾತ್ರ ಜೈಲಿನ ಹೊರಗಿದ್ದು, ನಂತರ ಮತ್ತೆ ಜೈಲಿಗೆ ಮರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಯರ ಬಳಕೆ?
ಅಜ್ಮೀರ್ ಉಪ ಪೊಲೀಸ್ ವರಿಷ್ಠಾಧಿಕಾರಿ ಶಿವಂ ಜೋಶಿ ಅವರ ಪ್ರಕಾರ, ದಿವ್ಯಾ ತಮ್ಮ ಇಬ್ಬರು ಚಿಕ್ಕ ಹೆಣ್ಣುಮಕ್ಕಳನ್ನು ನೋಡಿಕೊಳ್ಳಲು ಮತ್ತು ಮನೆಯನ್ನು ಸ್ವಚ್ಛಗೊಳಿಸಲು ಕೈದಿಯರ ನೆರವು ಬಯಸಿದ್ದರು. “ಅವರ ಹೆಣ್ಣುಮಕ್ಕಳು ತುಂಬಾ ಚಿಕ್ಕವರು. ಮಕ್ಕಳನ್ನು ನೋಡಿಕೊಳ್ಳಲು ಮತ್ತು ಮನೆಯನ್ನು ಸ್ವಚ್ಛಗೊಳಿಸಲು ಅವರು ಕೈದಿಯರ ನೆರವು ಪಡೆಯಲು ಬಯಸಿದ್ದರು,” ಎಂದು ಶಿವಂ ಜೋಶಿ ತಿಳಿಸಿದ್ದಾರೆ.
ಜೈಲರ್ ಆಗಿ ಕೈದಿಗಳ ಕಸ್ಟಡಿ, ಭದ್ರತೆ ಮತ್ತು ಶಿಸ್ತಿನ ಜವಾಬ್ದಾರಿ ಹೊಂದಿದ್ದ ದಿವ್ಯಾ, ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಪೊಲೀಸರ ಆರೋಪ. ನ್ಯಾಯಾಲಯದ ಆದೇಶದಂತೆ ಜೈಲಿನಲ್ಲಿ ಇರಿಸಲಾದ ಕೈದಿಯರನ್ನು ನಿಯಮಬಾಹಿರವಾಗಿ ಹೊರಗೆ ಕರೆದೊಯ್ಯಲು ಯತ್ನಿಸಿದ್ದರಿಂದ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎಫ್‌ಐಆರ್ ಬಳಿಕ ತಲೆಮರೆಸಿಕೊಂಡಿದ್ದ ಜೈಲರ್
ಜೈಲಿನ ಆಂತರಿಕ ವಿಚಾರಣೆ ಪೂರ್ಣಗೊಂಡು ದಿವ್ಯಾ ಅವರ ತಪ್ಪು ಸಾಬೀತಾಗಿದೆ ಎಂದು ಅಧಿಕಾರಿಗಳು ತಿಳಿಸಿದ ಬಳಿಕ, ಆಗಸ್ಟ್ 5ರಂದು ಅಜ್ಮೀರ್‌ನ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು. ಅಜ್ಮೀರ್ ಕೇಂದ್ರ ಕಾರಾಗೃಹದ ಸಿಬ್ಬಂದಿ ಮಹಿಪಾಲ್ ಮಂಗ್ಲೋಡಾ ನೀಡಿದ ವರದಿಯ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.
ಬಂಧನದಿಂದ ತಪ್ಪಿಸಿಕೊಳ್ಳಲು ದಿವ್ಯಾ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ. ಬಳಿಕ ಸಿವಿಲ್ ಲೈನ್ಸ್ ಠಾಣೆಯ ಇನ್‌ಸ್ಪೆಕ್ಟರ್ ಶಂಭು ಸಿಂಗ್ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡ ರಚಿಸಲಾಯಿತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಿಮಾಂಶು ಜಾಂಗಿಡ್ ಹಾಗೂ ಉಪ ಪೊಲೀಸ್ ವರಿಷ್ಠಾಧಿಕಾರಿ ಶಿವಂ ಜೋಶಿ ಅವರ ಮಾರ್ಗದರ್ಶನದಲ್ಲಿ ತಂಡ ಕಾರ್ಯಾಚರಣೆ ನಡೆಸಿತು.
ಸಿಸಿಟಿವಿ ದೃಶ್ಯಗಳು, ತಾಂತ್ರಿಕ ಸಾಕ್ಷ್ಯಗಳು ಹಾಗೂ ಘಟನಾ ಸ್ಥಳಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ ಪೊಲೀಸರು, ಸೈಬರ್ ಸೆಲ್ ನೆರವಿನಿಂದ ದಿವ್ಯಾ ಅವರ ಪತ್ತೆಗೆ ಮುಂದಾದರು. ಅಕ್ಟೋಬರ್ 6ರಂದು ಕೋಟಾ ಜಿಲ್ಲೆಯ ವಸತಿ ಫ್ಲ್ಯಾಟ್ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿದರು.
ಪತಿಯ ಬಾಡಿಗೆ ಮನೆಯಲ್ಲಿ ಬಂಧನ
ಅಜ್ಮೀರ್‌ನ ಸಿವಿಲ್ ಲೈನ್ಸ್ ಠಾಣೆಯ ಸಹಾಯಕ ಉಪನಿರೀಕ್ಷಕ ಮೊಯಿನುದ್ದೀನ್ ಅವರ ಪ್ರಕಾರ, ದಿವ್ಯಾ ತಮ್ಮ ಪತಿಯ ಬಾಡಿಗೆ ಮನೆಯಲ್ಲಿ ಇದ್ದಾಗ ಬಂಧಿಸಲಾಯಿತು. ಅವರ ಪತಿ ಕೋಟಾದಲ್ಲಿ ಜೈಲು ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೊಬೈಲ್ ಸಂಖ್ಯೆಯ ಆಧಾರದಲ್ಲಿ ದಿವ್ಯಾ ಅವರ ಸ್ಥಳವನ್ನು ಪತ್ತೆಹಚ್ಚಲಾಗಿತ್ತು. ಪೊಲೀಸರು ಅಲ್ಲಿಗೆ ತೆರಳಿದಾಗ ಅವರ ಪತಿ ತಮ್ಮ ಊರಿನಲ್ಲಿದ್ದರು ಎಂದು ಅವರು ತಿಳಿಸಿದ್ದಾರೆ.
ತಮ್ಮ ಮೇಲಿನ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ಮನೆ ಸ್ವಚ್ಛಗೊಳಿಸಲು ಯಾರಾದರೂ ಬೇಕಾಗಿದ್ದರಿಂದ ಅಧೀನ ಸಿಬ್ಬಂದಿ ಸೋನಿಯಾಗೆ ಮುಕ್ತ ಕಾರಾಗೃಹದಲ್ಲಿರುವ ಮಹಿಳೆಯರನ್ನು ಕರೆತರಲು ಹೇಳಿದ್ದಾಗಿ ದಿವ್ಯಾ ಸಮರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ.
ಮುಕ್ತ ಕಾರಾಗೃಹದ ಕೈದಿಗಳಿಗೆ ಹೊರಗೆ ಹೋಗಲು ಅವಕಾಶವಿರುವುದರಿಂದ ಅವರನ್ನು ಕರೆತರಲು ಸೂಚಿಸಿದ್ದೆ, ಆದರೆ ಸೋನಿಯಾ ಬೇರೆ ಇಬ್ಬರು ಕೈದಿಯರನ್ನು ಕರೆತಂದರು ಎಂಬುದು ಅವರ ಸಮರ್ಥನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆದರೆ, ಈ ಪ್ರಕರಣದ ಅಂತಿಮ ಪರಿಣಾಮ ದಿವ್ಯಾ ಅವರೇ ಜೈಲು ಸೇರುವಂತಾಗಿದೆ. ಈ ಹಿಂದೆ ಕೈದಿಗಳ ಭದ್ರತೆಯ ಜವಾಬ್ದಾರಿ ಹೊತ್ತಿದ್ದ ಮಹಿಳಾ ಜೈಲರ್ ಈಗ ಅದೇ ಕಾರಾಗೃಹದಲ್ಲಿ ಬಂಧಿಯಾಗಿದ್ದಾರೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಶಿವಂ ಜೋಶಿ ತಿಳಿಸಿದ್ದಾರೆ.