ರಾಜ್ಯ

ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ: ಕ್ಲೈಮ್ ಕಮಿಷನರ್ ಆಗಿ ನಿವೃತ್ತ ನ್ಯಾ. ಎಚ್ಎಸ್ ಕೆಂಪಣ್ಣ ನೇಮಕ

Lingaraj Badiger

ಬೆಂಗಳೂರು: ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಇತ್ತೀಚಿಗೆ ನಡೆದ ಗಲಭೆಯಲ್ಲಿ ಉಂಟಾಗಿರುವ ಸಾರ್ವಜನಿಕ ಮತ್ತು ಸರ್ಕಾರಿ ಆಸ್ತಿಗಳ ಹಾನಿಯನ್ನು ಅಂದಾಜಿಸಿ, ಪರಿಹಾರ ವಿತರಣೆ ಕುರಿತು ನಿರ್ಧಾರ ಕೈಗೊಳ್ಳಲು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎಸ್‌.ಕೆಂಪಣ್ಣ ನೇತೃತ್ವದಲ್ಲಿ ಕ್ಲೈಮ್‌ ಕಮಿಷನ್‌ ನೇಮಿಸಿ ಹೈಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ.

ಸರ್ಕಾರದ ಪ್ರಮಾಣ ಪತ್ರದ ಆಧಾರದ ಮೇಲೆ ಈ ಆದೇಶ ಹೊರಡಿಸಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕಾ ಮತ್ತು ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರಿದ್ದ ವಿಭಾಗೀಯ ಪೀಠ, ರಾಜ್ಯ ಸರ್ಕಾರ ಕ್ಲೈಮ್‌ ಕಮಿಷನರ್‌ ನೇಮಕದ ಕುರಿತು ಒಂದು ವಾರದಲ್ಲಿ ಅಧಿಕೃತ ಆದೇಶ ಹೊರಡಿಸಬೇಕು. ಅವರು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾಗಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಮಾನವನ್ನು ಪರಿಗಣಿಸಿ, ಅದಕ್ಕೆ ತಕ್ಕ ಗೌರವ ಧನ ನಿಗದಿಪಡಿಸಬೇಕು. ಜೊತೆಗೆ, ಹಾಲಿ ನ್ಯಾಯಮೂರ್ತಿಗಳಿಗೆ ದೊರೆಯುವ ಗೌರವ, ಸೌಕರ್ಯಗಳನ್ನು ನೀಡಬೇಕು ಎಂದು ಆದೇಶ ನೀಡಿದೆ.

ಘಟನೆಯಲ್ಲಿ ಹಾನಿಗೊಳಗಾದವರಿಗೆ, ಆರೋಪಿಗಳಿಂದಲೇ ಪರಿಹಾರ ಕೊಡಿಸಬೇಕು ಮತ್ತು ತನಿಖೆಯನ್ನು ಸೂಕ್ತ ಏಜೆನ್ಸಿಗೆ ವರ್ಗಾಯಿಸಬೇಕು ಎಂಬಿತ್ಯಾದಿ ಮನವಿಗಳನ್ನು ಹೊಂದಿದ್ದ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠ, ಈ ಮಧ್ಯಂತರ ನಿರ್ದೇಶನ ನೀಡಿದೆ.

ಗಲಭೆಯಲ್ಲಿ ಆದ ನಷ್ಟವನ್ನು ವಸೂಲಿ ಮಾಡುವುದಕ್ಕೆ ಹಾಗೂ ಪರಿಹಾರ ನೀಡುವ ಪ್ರಕ್ರಿಯೆಯ ಮೇಲ್ವಿಚಾರಣೆಗೆ ಕ್ಲೈಮ್‌ ಕಮಿಷನರ್‌ ನೇಮಕ ಮಾಡುವಂತೆ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅಲ್ಲದೆ ಇದೇ ವಿಚಾರವಾಗಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿನ ಅಂಶಗಳನ್ನು ಗುರುತಿಸಿ ಅವುಗಳ ವಿಚಾರಣೆ ನಡೆಸಿದ ಹೈಕೋರ್ಟ್ ಕೆಂಪಣ್ಣ ಅವರನ್ನು ಕ್ಲೈಮ್ ಕಮಿಷನರ್ ಆಗಿ ನೇಮಕ ಮಾಡಿದೆ.

SCROLL FOR NEXT