ರಾಜ್ಯ

ಬೆಳಗಾವಿಯಲ್ಲಿ ತಣ್ಣಗಾದ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ, ಮೂವರು ಸಚಿವರ ಭೇಟಿ

Sumana Upadhyaya

ಬೆಳಗಾವಿ: ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಪೀರನವಾಡಿಯಲ್ಲಿ ಸ್ಥಾಪನೆ ಮಾಡಿದ್ದಕ್ಕೆ ಮರಾಠಿ ಪರ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿ ಅದು ಘರ್ಷಣೆಗೆ ತಿರುಗಿ ನಂತರ ಅದನ್ನು ತಣಿಸಲು ಹಿರಿಯ ಸಚಿವರುಗಳು ಬೆಳಗಾವಿಗೆ ಬರಬೇಕಾಯಿತು.

ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ, ಅಬಕಾರಿ ಸಚಿವ ಹೆಚ್ ನಾಗೇಶ್, ಜಲ ಸಂಪನ್ಮೂಲ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ನಿನ್ನೆ ಪೀರನವಾಡಿಗೆ ಆಗಮಿಸಿ ಮಾತುಕತೆ ನಡೆಸಿ ಶಾಂತಿ ನೆಲೆಸುವ ಪ್ರಯತ್ನ ಮಾಡಿದರು.

ಸಂಗೊಳ್ಳಿ ರಾಯಣ್ಣ ಮತ್ತು ಛತ್ರಪತಿ ಶಿವಾಜಿ ಇಬ್ಬರ ಪ್ರತಿಮೆಗೂ ಮಾಲಾರ್ಪಣೆ ಮಾಡಿದ ಸಚಿವರುಗಳು ಜನರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡರು. ಸಂಗೊಳ್ಳಿ ರಾಯಣ್ಣ ನಮ್ಮ ನಾಡಿನ ಅತಿದೊಡ್ಡ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು ಛತ್ರಪತಿ ಶಿವಾಜಿ ಮೊಘಲರ ವಿರುದ್ಧ ಹೋರಾಡಿ ಹಿಂದೂ ಸಮಾಜದ ಬಲವರ್ಧನೆಗೆ ಶ್ರಮಿಸಿದ್ದರು. ಇಬ್ಬರೂ ನಮ್ಮ ಇತಿಹಾಸದಲ್ಲಿ ಪ್ರಮುಖರು. ಸಂಗೊಳ್ಳಿ ರಾಯಣ್ಣ ಅವರಿಗೆ ರಾಣಿ ಚೆನ್ನಮ್ಮ ಮಾರ್ಗದರ್ಶನ ಮಾಡಿದ್ದರು. ಶಿವಾಜಿ ಅವರಿಗೆ ಅವರ ತಾಯಿ ಜಿಜಾಬಾಯಿ ಹೇಳಿಕೊಟ್ಟಿದ್ದರು ಎಂದರು.

ವಿವಾದ ಹೊತ್ತಿ ದೊಡ್ಡದಾಗುವ ಮೊದಲೇ ಸಚಿವ ರಮೇಶ್ ಜಾರಕಿಹೊಳಿ ಮತ್ತು ಗ್ರಾಮಸ್ಥರು ತಮ್ಮ ಸಮಯಪ್ರಜ್ಞೆ, ಬುದ್ಧಿವಂತಿಕೆಯಿಂದ ವಿವಾದ, ಉದ್ವಿಗ್ನ ಸ್ಥಿತಿಯನ್ನು ತಣಿಸಿದ್ದಾರೆ. ವಿವಾದಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಒಟ್ಟು ಮೂರು ಕೇಸುಗಳನ್ನು ದಾಖಲಿಸಲಾಗಿದೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜೊತೆಗೆ ಈ ಬಗ್ಗೆ ಮಾತುಕತೆ ನಡೆಸಿದ್ದು ಸಂಗೊಳ್ಳಿ ರಾಯಣ್ಣ ಅನುಯಾಯಿಗಳ ವಿರುದ್ಧ ದಾಖಲಿಸಿರುವ ಕೇಸನ್ನು ಹಿಂತೆಗೆದುಕೊಳ್ಳಲಾಗುವುದು ಎಂದರು.

SCROLL FOR NEXT