ರಾಜ್ಯ

ಬಾಗಲಕೋಟೆ: ಬಿಜೆಪಿ ಶಾಸಕ ಸಿದ್ದು ಸವದಿ ರಾಜಿನಾಮೆಗೆ ಆಗ್ರಹಿಸಿ ಕೆಪಿಸಿಸಿ ಪ್ರತಿಭಟನೆ

Shilpa D

ಬಾಗಲಕೋಟೆ: ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ವೇಳೆ ಬಿಜೆಪಿ ಶಾಸಕ ಸಿದ್ದು ಸವದಿಯಿಂದ ತಳ್ಳಾಟಕ್ಕೆ ಒಳಗಾಗಿದ್ದ ಮಹಿಳಾ ಸದಸ್ಯೆ ಚಾಂದಿನಿ ನಾಯ್ಕ್‌ ಆವರಿಗೆ ಗರ್ಭಪಾತವಾಗಿದ್ದು, ಇದೀಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್‌ ಪ್ರತಿಭಟನೆ ನಡೆಸಲು ಮುಂದಾಗಿದೆ.

ಬಿಜೆಪಿ ಶಾಸಕ ಸಿದ್ದು ಸವದಿ ಮಹಿಳಾ ಸದಸ್ಯೆಯನ್ನು ತಳ್ಳಿದ್ದರಿಂದ ಆಕೆಗೆ ಗರ್ಭಪಾತವಾಗಿದೆ. ಹೀಗಾಗಿ ಘಟನೆಯನ್ನು ಖಂಡಿಸಿ ಮಹಾಲಿಂಗಪುರದಲ್ಲಿ ಡಿಸೆಂಬರ್ 5ಕ್ಕೆ ರಾಜ್ಯ ಕಾಂಗ್ರೆಸ್ ಬೃಹತ್ ಪ್ರತಿಭಟನೆಗೆ ನಿಧಾ೯ರ ಮಾಡಿದೆ. ಉಮಾಶ್ರೀ ಅವರು ಪುರಸಭಾ ಸದಸ್ಯೆ ಚಾಂದಿನಿ ನಾಯ್ಕ್ ಮನೆಗೆ ತೆರಳಿ ಸಾಂತ್ವಾನ ಹೇಳಿದ್ದಾರೆ ಎಂದು ತಿಳಿದು ಬಂದಿದೆ. 

ಮಹಾಲಿಂಗಪುರ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆ ವೇಳೆ ಅಕ್ಟೋಬರ್‌ 9ರ ಸೋಮವಾರ ಗಲಾಟೆ ನಡೆದಿತ್ತು. ಬಿಜೆಪಿಯ ಮೂವರು ಸದಸ್ಯೆಯರು ಕಾಂಗ್ರೆಸ್‌ಗೆ
ಬೆಂಬಲ ನೀಡಿದ್ದರಿಂದ ಬಿಜೆಪಿಗೆ ಅಧಿಕಾರ ಕಳೆದುಕೊಳ್ಳುವ ಸ್ಥಿತಿ ಎದುರಾಗಿತ್ತು. ಮೂವರು ಸದಸ್ಯೆಯರು ಸಭೆಗೆ ಬಾರದಂತೆ ತಡೆಯಲು ಶಾಸಕ ಸಿದ್ದು ಸವದಿ ಹಾಗೂ ಬಿಜೆಪಿ ಕಾರ್ಯಕರ್ತರು ಸದಸ್ಯೆಯರನ್ನು ತಳ್ಳಾಡಿದ್ದರು. 

ನಾನು ಯಾವುದೇ ಮಹಿಳಾ ಕೌನ್ಸಿರಲ್ ಅನ್ನು ತಳ್ಳಿಲ್ಲ, ವಿರೋಧಿ ಸದಸ್ಯರಿಂದ ನಾನು ಅವರನ್ನು ರಕ್ಷಿಸಲು ಮುಂದಾಗಿದ್ದೆ, ನಾನು ಎಳೆದಾಡಿದ್ದರಿಂದ ಚಾಂದಿನಿ ನಾಯ್ಕ್ ಅವರಿಗೆ ಗರ್ಭಪಾತವಾಗಿದೆ ಎಂಬುದು ಸುಳ್ಳು ಆರೋಪ ಎಂದು ಶಾಸಕ ಸಿದ್ದು ಸವದಿ ಸ್ಪಷ್ಟನೆ ನೀಡಿದ್ದಾರೆ.

ಶಾಸಕ ಸಿದ್ದು ಸವದಿ ಎಳೆದಾಡಿದ್ದರಿಂದ ನನ್ನ ಪತ್ನಿಗೆ ಗರ್ಭಪಾತವಾಗಿದೆ ಎಂದು ನಾನು ಹೇಳಿಯೇ ಇಲ್ಲ ಎಂದು ಚಾಂದಿನಿ ನಾಯ್ಕ್ ಪತಿ ನಾಗೇಶ್ ಹೇಳುವ ಮೂಲಕ ತಮ್ಮ ಆರೋಪವನ್ನು ವಾಪಸ್ ಪಡೆದಿದ್ದಾರೆ. ನಾಗೇಶ್ ತಮ್ಮ ಆರೋಪವನ್ನು ವಾಪಸ್ ಪಡೆದಿದ್ದಾರೆ ಆದರೆ ನಾವು ಹೋರಾಟ ಮುಂದುವರಿಸುತ್ತೇವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಂಜಯನಮಠ್ ಹೇಳಿದ್ದಾರೆ.
 

SCROLL FOR NEXT