ರಾಜ್ಯ

ಕಿಕ್ ಪ್ರಿಯರಿಗೆ ಸಿಹಿಸುದ್ದಿ: ಹೊಸದಾಗಿ, ಸ್ವಚ್ಛವಾಗಿ ಕಂಗೊಳಿಸಲಿವೆ ಬಾರ್, ಲಿಕ್ಕರ್ ಶಾಪ್ ಗಳು!

Sumana Upadhyaya

ಬೆಂಗಳೂರು: ಕಿಕ್ ಪ್ರಿಯರಿಗೊಂದು ಸಿಹಿಸುದ್ದಿ. ರಾಜ್ಯದಲ್ಲಿರುವ ಲಿಕ್ಕರ್ ಶಾಪ್ ಗಳು, ಬಾರ್ ಗಳು ಇನ್ನು ಮುಂದೆ ಹೊಸ ನೋಟದಲ್ಲಿ ಕಂಗೊಳಿಸಲಿವೆ.

ಲಿಕ್ಕರ್ ಶಾಪ್ ನ ನಾಮಫಲಕದಿಂದ ಹಿಡಿದು ಗೋಡೆ ಪೈಂಟಿಂಗ್, ಅಡುಗೆ ಮನೆ, ಹೊರಾಂಗಣ ಎಲ್ಲವೂ ಇನ್ನು ಮುಂದೆ ಹೊಸತನದಿಂದ ಕಂಗೊಳಿಸಲಿವೆ. ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ರಾಜ್ಯಸರ್ಕಾರ ಸದ್ಯದಲ್ಲಿಯೇ ಮಾರ್ಗಸೂಚಿ ಹೊರಡಿಸಲಿದೆ. 
ಅಬಕಾರಿ ಇಲಾಖೆ ತಪಾಸಣೆ ನಡೆಸಲಿದ್ದು ಆವರಣಗಳು ಸ್ವಚ್ಛವಾಗಿಲ್ಲದಿದ್ದರೆ, ಮದ್ಯಪಾನಿಗಳು ಕುಡಿಯುವ ಗ್ಲಾಸ್ ಗಳು ಸ್ವಚ್ಛವಾಗಿಲ್ಲದಿದ್ದರೆ ಪರವಾನಗಿ ರದ್ದುಪಡಿಸಲಾಗುತ್ತದೆ ಎಂದು ಅಬಕಾರಿ ಸಚಿವ ಹೆಚ್ ನಾಗೇಶ್ ತಿಳಿಸಿದ್ದಾರೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಹಲವು ಲಿಕ್ಕರ್ ಸ್ಟೋರ್ ಗಳು ಮತ್ತು ಬಾರ್ ಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವುದಿಲ್ಲ. ಅದರ ಬಗ್ಗೆ ಗಮನವನ್ನು ಕೂಡ ನೀಡುವುದಿಲ್ಲ. ಬಾರ್ ಅಂಡ್ ರೆಸ್ಟೋರೆಂಟ್ ಗಳು, ಲಿಕ್ಕರ್ ಶಾಪ್ ಗಳು ನೋಡಲು ಆಕರ್ಷಕವಾಗಿರಬೇಕು. ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಇಲ್ಲದಿದ್ದರೂ ಕೂಡ ಸ್ವಚ್ಛತೆಯಂತೂ ಇರಬೇಕು. ಈ ನಿಟ್ಟಿನಲ್ಲಿ ನಾಮಫಲಕ, ಸೂಚನಾ ಫಲಕಗಳನ್ನು ಬದಲಾಯಿಸುವಂತೆ, ಪೀಠೋಪಕರಣಗಳನ್ನು ಸ್ವಚ್ಛಗೊಳಿಸುವಂತೆ ಮತ್ತು ಆವರಣಗಳನ್ನು, ಗೋಡೆಗಳನ್ನು ಸ್ವಚ್ಛಗೊಳಿಸುವಂತೆ ಮಾರ್ಗಸೂಚಿ ಹೊರಡಿಸಲಾಗುವುದು ಎಂದರು.

ಸರ್ಕಾರ ಮಾರ್ಗಸೂಚಿ ಹೊರಡಿಸಿದ ನಂತರ ಅಧಿಕಾರಿಗಳು ಕಾಲಕಾಲಕ್ಕೆ ಹೋಗಿ ತಪಾಸಣೆ ಮಾಡಲಿದ್ದಾರೆ. ಸರ್ಕಾರದ ನಿಯಮಗಳನ್ನು ಪಾಲಿಸದ ಬಾರ್ ಗಳು, ಲಿಕ್ಕರ್ ಶಾಪ್ ಗಳ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದರು.

SCROLL FOR NEXT