ರಾಜ್ಯ

ಅರ್ಕಾವತಿ ಬಡಾವಣೆ: ಮಾಲೀಕರನ್ನು ನಿವೇಶನದತ್ತ ಸುಳಿಯಲೂ ಬಿಡದೆ ಸೂಕ್ತ ಪರಿಹಾರಕ್ಕಾಗಿ ರೈತರ ಪಟ್ಟು!

Nagaraja AB

ಬೆಂಗಳೂರು: ಸೂಕ್ತ ಪರಿಹಾರ ನೀಡದ ಹೊರತು ನಿವೇಶನದ ಹತ್ತಿರ ಯಾರೂ ಸುಳಿಯಲು ಅವಕಾಶ ನೀಡುವುದಿಲ್ಲ ಎಂದು ರೈತರು ಬಿಗಿಪಟ್ಟು ಹಿಡಿದಿರುವುದರಿಂದ ಅರ್ಕಾವತಿ ಲೇಔಟ್ ನ ಒಂದು ಬ್ಲಾಕಿನ ಸುಮಾರು 600 ನಿವೇಶನಗಳ ಮಾಲೀಕರು ತಮ್ಮ ಹತ್ತಿರದ ನಿವೇಶನಗಳ ಬಳಿ ಹೋಗದಂತಾಗಿದ್ದು, ಪರ್ಯಾಯ ನಿವೇಶನ ಪಡೆಯಲು ವರ್ಷಗಳಗಟ್ಟಲೇ ಕಾಯುವಂತಾಗಿದೆ. ಹೆಣ್ಣೂರು ಮುಖ್ಯರಸ್ತೆಯಲ್ಲಿರುವ ಬೈರತಿಕಾನೆಯ 18ನೇ ಬ್ಲಾಕ್ ನಲ್ಲಿರುವ ಭೂ ಮಾಲೀಕರು ಪಜೀತಿ ಇದಾಗಿದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅರ್ಕಾವತಿ ನಿವೇಶನ ಹಂಚಿಕೆದಾರರ ಸಂಘದ ಉಪಾಧ್ಯಕ್ಷ ಜೆ ಮಾಧವ ರಾವ್, ಬಡಾವಣೆ ನಿರ್ಮಾಣಕ್ಕಾಗಿ ದಶಕದ ಹಿಂದೆಯೇ ರೈತರು 17 ಎಕರೆ ಜಮೀನನ್ನು ಸರ್ಕಾರಕ್ಕೆ ನೀಡಿದ್ದು, 600 ಜನರಿಗೆ ಇಲ್ಲಿ ನಿವೇಶನಗಳು ಹಂಚಿಕೆಯಾಗಿವೆ. ಆಗಿನಿಂದಲೂ, ರಸ್ತೆ, ಕುಡಿಯುವ ನೀರು, ವಿದ್ಯುತ್ ಮತ್ತಿತರ ಮೂಲಸೌಕರ್ಯ ವ್ಯವಸ್ಥೆಯನ್ನು ಬಿಡಿಎ ಮಾಡಿಲ್ಲ. ಆದಾಗ್ಯೂ, ರೈತರು ಅವರ ಜಮೀನನ್ನು ಮುಟ್ಟಲು ಬಿಡುತ್ತಿಲ್ಲ ಎಂದರು.

ನಿವೇಶನ ಮಾಲೀಕರು ಬೋರೆವೆಲ್ ಕೊರೆಯಲು ಪ್ರಯತ್ನಿಸಿದರೆ ರೈತರು ತಡೆಯುತ್ತಾರೆ. ಬಿಡಿಎ ಅಧಿಕಾರಿಗಳು ಸ್ಥಳಕ್ಕೆ ಬಂದು ಸರ್ವೇ ಮಾಡಲು ಸಹ ಬಿಡುತ್ತಿಲ್ಲ. ಸ್ಥಳೀಯ ಪೊಲೀಸ್ ಠಾಣೆ ಮೆಟ್ಟಿಲೇರಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಅರ್ಕಾವತಿ ನಿವೇಶನ ಹಂಚಿಕೆದಾರರು ಒಕ್ಕೂಟದ ಅಧ್ಯಕ್ಷ ಎಂ. ನಾಗರಾಜ್ ಮಾತನಾಡಿ, ನ್ಯಾಯಕೋರಿ ಕಳೆದ ವಾರ ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಅವರನ್ನು ಭೇಟಿಯಾಗಿದ್ದು, ಈ ಮಾಸಾಂತ್ಯ ಅಥವಾ ಜನವರಿ ಆರಂಭದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

16 ವರ್ಷಗಳ ಹಿಂದೆ ಬಿಡಿಎ 1,806 ಎಕರೆ ಜಮೀನನ್ನು ಬಡಾವಣೆ ಅಭಿವೃದ್ಧಿಗಾಗಿ ಸ್ವಾಧೀನಪಡಿಸಿಕೊಂಡಿತ್ತು, ಅದರಲ್ಲಿ 600 ಎಕರೆ ದಾವೆಗಳಲ್ಲಿ ಸಿಲುಕಿಕೊಂಡಿವೆ. ಭೂ ಸ್ವಾಧೀನದ ಅಂತಿಮ ಅಧಿಸೂಚನೆಯನ್ನು 2004ರಲ್ಲಿ ಹೊರಡಿಸಲಾಗಿತ್ತು. ಆದರೆ, ತದ ನಂತರ ಕೆಲ ಭೂಮಿಯನ್ನು ಡಿನೋಟಿಫೈ ಮಾಡಲಾಗಿತ್ತು. 2014ರಲ್ಲಿ ಮತ್ತೊಂದು ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗಿತ್ತು.

SCROLL FOR NEXT