ರಾಜ್ಯ

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನೀತಿ ಸಂಹಿತೆ ಪಾಲನೆಗೆ ಆದ್ಯತೆ ನೀಡಿ: ಚುನಾವಣಾ ಆಯೋಗ

Manjula VN

ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷದ ಮುಖಂಡರು, ಸ್ಪರ್ಧಾಳುಗಳು ಮಾದರಿ ನೀತಿ ಸಂಹಿತೆ ಹಾಗೂ ಕಾನೂನು ಉಲ್ಲಂಘನೆಯಾಗದಂತೆ ಅಗತ್ಯ ಕ್ರಮವಹಿಸಬೇಕೆಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಹೊನ್ನಾಂಬ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಗ್ರಾಮ ಪಂಚಾಯ್ತಿ ಚುನಾವಣೆಗಳು ಪಕ್ಷ ರಹಿತ ಚುನಾವಣೆಯಾಗಿದ್ದು, ರಾಜಕೀಯ ಪಕ್ಷಗಳು ಈ ಚುನಾವಣೆಯಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುವ, ಸಭೆ-ಸಮಾರಂಭಗಳನ್ನು ನಡೆಸುವ ರಾಜಕೀಯ ಮುಖಂಡರುಗಳ ಭಾವಚಿತ್ರಗಳನ್ನು ಕರಪತ್ರಗಳಲ್ಲಿ ಮುದ್ರಿಸಿ ಪಕ್ಷಗಳ ಬಾವುಟ ಮತ್ತು ಚಿಹ್ನೆಯನ್ನು ಬಳಸಿಕೊಂಡು ಪ್ರಚಾರ ಮಾಡದಿರುವಂತೆ ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.

ರಾಜಕೀಯ ಪಕ್ಷಗಳು ಸಭೆ-ಸಮಾರಂಭಗಳನ್ನು ಏರ್ಪಡಿಸಿ ವೇದಿಕೆ ಮೇಲೆ ಪಕ್ಷದ ಬಾವುಟ, ಬ್ಯಾನರ್‌ಗಳನ್ನು ಬಳಸಲು ಅನುಮತಿ ಇರುವುದಿಲ್ಲ. ಸ್ಪರ್ಧಾಳುಗಳನ್ನು ತಮ್ಮ ಪಕ್ಷದ ಅಥವಾ ಬೆಂಬಲಿತ ಅಭ್ಯರ್ಥಿ ಎಂದು ಪರಿಚಯಿಸುವುದು ಹಾಗೂ ಅವರ ಪರವಾಗಿ ಮತಯಾಚನೆ ಮಾಡುವುದಕ್ಕೆ ಅನುಮತಿ ಇರುವುದಿಲ್ಲ.

ಚುನಾವಣೆಗೆ ಸ್ಪರ್ಧಿಸಿದ ಸ್ಪರ್ಧಾಳುಗಳು ರಾಜಕೀಯ ಮುಖಂಡರ ಭಾವಚಿತ್ರ ಅಥವಾ ಪಕ್ಷದ ಚಿಹ್ನೆಯಿರುವ ಕರಪತ್ರ, ಕಟೌಟ್, ಬ್ಯಾನರ್ ಮತ್ತು ಬಂಟಿಂಗ್‌ಗಳು, ಟಿ.ವಿ.ಮಾಧ್ಯಮಗಳು ಹಾಗೂ ಪತ್ರಿಕೆಗಳ ಮೂಲಕ ಪ್ರಚಾರ ಮಾಡುವಂತಿಲ್ಲ.

ಇವುಗಳಲ್ಲಿ ಯಾವುದೇ ಪ್ರಕರಣಗಳು ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಉಲ್ಲಂಘನೆಯಾಗಿರುವುದು ಕಂಡು ಬಂದಲ್ಲಿ ಅಂತಹ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ಅಂತಹವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಆಯಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT