ರಾಜ್ಯ

ಡಿವೈಎಸ್ಪಿ ಲಕ್ಷ್ಮೀ ಆತ್ಮಹತ್ಯೆ ಪ್ರಕರಣ: ಸಂಶಯ ವ್ಯಕ್ತಪಡಿಸಿದ ತಂದೆ, ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು

Manjula VN

ಬೆಂಗಳೂರು: ಮಗಳು ಲಕ್ಷ್ಮೀ ಸಾವಿನ ಬಗ್ಗೆ ಸಂಶಯವಿದ್ದು, ಆಕೆಯ ಸ್ನೇಹಿತರಾದ ಮನು ಹಾಗೂ ಪ್ರಜ್ವಲ್ ಮೇಲೆ ಅನುಮಾನವಿದೆ ಎಂದು ಸಿಐಡಿ ಡಿವೈಎಸ್ ಪಿ ಆಗಿದ್ದ ಲಕ್ಷ್ಮೀ ಅವರ ತಂದೆ ವೆಂಕಟೇಶ್ ಆರೋಪಿಸಿದ್ದಾರೆ.

ಸ್ನೇಹಿತನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಲಕ್ಷ್ಮೀ ಅವರ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ವೆಂಕಟೇಶ್, ಕಿಟಕಿಯ ‌ಕಂಬಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕೆಯ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಆಕೆಯ ಕಾಲು ನೆಲಕ್ಕೆ ತಾಗುವಂತೆ ಇತ್ತಂತೆ ಹೀಗಿರುವಾಗ ಅದು ಆತ್ಮಹತ್ಯೆ ಆಗಲು ಹೇಗೆ ಸಾಧ್ಯ. ಹೀಗಾಗಿ ಸಾವಿನ ಬಗ್ಗೆ ತಮಗೆ ಅನುಮಾನವಿದ್ದು, ಸ್ನೇಹಿತರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದರು.

ಮಗಳ ಸಾಂಸಾರಿಕ ಜೀವನದಲ್ಲಿ ಯಾವುದೇ ತೊಂದರೆ ಇರಲಿಲ್ಲ. ಚೆನ್ನಾಗಿತ್ತು. ಕಳೆದ ಎರಡು ದಿನಗಳ ಹಿಂದೆ ಅಳಿಯ ಹೈದ್ರಾಬಾದ್ ಗೆ ತೆರಳಿದ್ದರು. ಹೀಗಾಗಿ ಮಗಳ ಸ್ವಲ್ಪ ಬೇಸರ ಮಾಡಿಕೊಂಡಿದ್ದಳು. ಆದರೆ, ಆಕೆ‌ ಮಾನಸಿಕ ಖಿನ್ನತೆಗೆ ಒಳಗಾಗಿರಲಿಲ್ಲ. ಆ ಮಟ್ಟಕ್ಕೆ ತಲುಪುವ ಯಾವುದೇ ಸಮಸ್ಯೆಯೂ ಇರಲಿಲ್ಲ.

ಹಣ, ಮನೆ, ಅಧಿಕಾರ ಎಲ್ಲವೂ ಹೀಗಿರುವಾಗ ಅವಳ್ಯಾಕೆ ಆತ್ಮಹತ್ಯೆ ಗೆ ಮಾಡಿಕೊಳ್ಳುತ್ತಾಳೆ ಅದು ಕೂಡ ಸ್ನೇಹಿತನ ಮನೆಯಲ್ಲಿ ಎಂದು ಪ್ರಶ್ನಿಸಿದ ಅವರು, ಅವಳಿಗೇನಾದರೂ ಸಮಸ್ಯೆ ಇದ್ದರೇ ಗಂಡನ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಳು ಎಂದರು.

ಮಕ್ಕಳಾಗಿದಿರುವುದಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂಬ ಸುದ್ದಿ ಶುದ್ಧ ಸುಳ್ಳು. ಅವಳೊಬ್ಬಳು ರ್ಯಾಂಕ್ ವಿದ್ಯಾರ್ಥಿನಿ. ಈ ನಿರ್ಧಾರ ಕೈಗೊಳ್ಳುವುದಿಲ್ಲ ಎಂದರು.

ಈ ಮಧ್ಯೆ, ಸಿಐಡಿ ಡಿವೈಎಸ್ ಪಿಯಾಗಿದ್ದ ತಮ್ಮ ಪುತ್ರಿ ಲಕ್ಷ್ಮೀ ಸಾವಿನ ಬಗ್ಗೆ ಸ್ನೇಹಿತರ ಮೇಲೆ ಅನುಮಾನವಿದೆ ಎಂದು ದೂರಿ ತಂದೆ ವೆಂಕಟೇಶ್ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಐಪಿಸಿ ಸೆಕ್ಷನ್ 174-ಸಿ ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮೀ ಅವರ ಐದು ಜನ ಸ್ನೇಹಿತರನ್ನು ವಿಚಾರಣೆ ನಡೆಸಿದ ಪೊಲೀಸರು, ಗುತ್ತಿಗೆದಾರ ಮನು, ಪ್ರಜ್ವಲ್ ಸೇರಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಸದ್ಯ ನಾಲ್ವರನ್ನು ಹೆಚ್ಚಿನ ವಿಚಾರಣೆಗೆ ಪೊಲೀಸರು ಒಳಪಡಿಸಿದ್ದಾರೆ. ಇನ್ನು, ಲಕ್ಷ್ಮೀ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾದ ವಿನಾಯಕ ಲೇಔಟ್ ನ ಖಾಸಗಿ ಅಪಾರ್ಟ್ ಮೆಂಟ್ ಗೆ ವಿಧಿ ವಿಜ್ಞಾನ ಪ್ರಯೋಗಾಲಯ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುತ್ತಿದೆ.

ಲಕ್ಷ್ಮೀ ಅವರ ಮೃತದೇಹ ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಪೊಲೀಸರು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ.

SCROLL FOR NEXT