ಬೆಂಗಳೂರು: ಬೆಂಗಳೂರಿನ ಮುಂದಿನ ಎರಡು ವರ್ಷಗಳಲ್ಲಿ ಕೈಗೆತ್ತಿಕೊಂಡಿರುವ ಎಲ್ಲಾ ಯೋಜನೆಗಳನ್ನೂ ಪೂರ್ಣಗೊಳಿಸಿ ಬೆಂಗಳೂರು ನಗರವನ್ನು ಅಭಿವೃದ್ಧಿ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.
ಮಿಷನ್ ಬೆಂಗಳೂರು 2022 ಕೈಪಿಡಿ ಬಿಡುಗಡೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ಪ್ರಗತಿ ಪಥದಲ್ಲಿ ಮುಂದಿರುವ ಬೆಂಗಳೂರು ಮಹಾನಗರ ಯಾವಾಗಲೂ ಎಲ್ಲಾ ವಿಚಾರದಲ್ಲೂ ಮುಂದಿದೆ. 2022ರಲ್ಲಿ ಬೆಂಗಳೂರು ಹೇಗಿರಬೇಕೆಂದು ಯೋಜನೆ ರೂಪಿಸಿದ್ದೇವೆ. ಬೆಂಗಳೂರು ವೈಶಿಷ್ಟ್ಯದ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ. ಬೆಂಗಳೂರು ಅಭಿವೃದ್ಧಿಗೆ ಒತ್ತು ಕೊಡುವಂತೆ ಸಲಹೆಯನ್ನೂ ನೀಡಿದ್ದಾರೆ. ಸದಾ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲಿ ಎಂದು ಸಲಹೆ ಕೊಟ್ಟಿದ್ದರು. ತಂತ್ರಜ್ಞಾನ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುನ್ನಡೆ ಸಾಧಿಸಬೇಕು. ಪ್ರಧಾನಿ ಉತ್ತೇಜನಕಾರಿ ಮಾತುಗಳಿಂದ ಪ್ರಭಾವಿತನಾದೆ. ವಿಜ್ಞಾನದ ರಾಜಧಾನಿ, ಐಟಿ-ಬಿಟಿ, ಸಿಲಿಕಾನ್ ಸಿಟಿಯಾಗಿದೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗೆ ಯೋಜನೆ ರೂಪಿಸುತ್ತೇವೆ. ಇದು ರಾಜ್ಯದ ರಾಜಧಾನಿಯಷ್ಟೇ ಅಲ್ಲ ಉದ್ಯಮ, ವಾಣಿಜ್ಯ, ಉದ್ಯೋಗದ ರಾಜಧಾನಿಯಾಗಿದೆ. ಮುಂದಿನ ಎರಡು ವರ್ಷದಲ್ಲಿ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಿ ಬೆಂಗಳೂರು ಅಭಿವೃದ್ಧಿ ಮಾಡಲಾಗುತ್ತೆದ ಎಂದು ಹೇಳಿದ್ದಾರೆ.
ವಿಶ್ವಮಾನ್ಯತೆ ಪಡೆದ ಮಹಾನಗರಗಳಲ್ಲಿ ಒಂದಾಗಿದೆ. ಸಮಸ್ಯೆಗಳನ್ನು ಕೇಂದ್ರೀಕರಿಸಿ ಅಧ್ಯಯನ ನಡೆಸಿ ಯೋಜನೆ ರೂಪಿಸುತ್ತೇವೆ. ಬೆಂಗಳೂರನ್ನು ಎಲ್ಲಾ ಆಯಾಮಗಳಲ್ಲಿ ಅಭಿವೃದ್ಧಿಪಡಿಸಬೇಕು. ಬೆಂಗಳೂರಿನಲ್ಲಿ ವಾಹನ ದಟ್ಟಣೆ, ವಾಯುಮಾಲಿನ್ಯ ನಿಯಂತ್ರಣೆ ಹಾಗೂ ಸಂಚಾರ ಸುಗಮಗೊಳಿಸಲು ಸರ್ಕಾರದಿಂದ ಎಲ್ಲಾ ಕ್ರಮ ಕೈಗೊಳ್ಳುತ್ತೇವೆ ಸಂಚಾರ ದಟ್ಟಣೆಯಿರುವ ರಸ್ತೆಗಳನ್ನು ಗುರುತಿಸಿ ಅಭಿವೃದ್ಧಿಪಡಿಸುತ್ತೇವೆ. ಕೆಆರ್ಡಿಸಿಎಲ್ ವತಿಯಿಂದ ರಸ್ತೆಗಳ ಅಭಿವೃದ್ಧಿಗೆ ಕ್ರಮ ಜರುಗುತ್ತದೆ. ಬೆಂಗಳೂರು ನಗರದಲ್ಲಿ 1.25 ಕೋಟಿ ಜನರು ನೆಲೆಸಿದ್ದಾರೆ. ಕೆಪಿಸಿಯಿಂದ ಬಿಡದಿ ಬಳಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುತ್ತೇವೆ ಎಂದು ಹೇಳಿದರು. ಹಸಿರು ಬೆಂಗಳೂರು ಮರುನಿರ್ಮಾಣಕ್ಕೆ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ನಗರದ ಸೌಂದರ್ಯಕ್ಕೆ ಪೂರಕವಾಗಿ ರಾಜಕಾಲುವೆ ನಿರ್ಮಾಣವಾಗುತ್ತೆ. ತ್ಯಾಜ್ಯ ನೀರು ಮರುಬಳಕೆಗೆ ಯೋಜನೆ ಸಿದ್ಧಗೊಳಿಸಲಾಗುತ್ತಿದೆ. ಹಸಿರು ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಬೆಂಗಳೂರು ಮತ್ತೆ ಹಸಿರು ನಗರಿಯಾಗಿ ಪರಿವರ್ತಿಸಬೇಕು. ಬಿಬಿಎಂಪಿ ಆಡಳಿತದಲ್ಲಿ ಪಾರದರ್ಶಕತೆ ತರಲು ಕ್ರಮ ಜರುಗಿಸಲಾಗುವುದು. ಹೊರವರ್ತುಲ ರಸ್ತೆಗಳ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ. 2 ವರ್ಷಗಳಲ್ಲಿ ಎಲ್ಲಾ ಕಾರ್ಯಕ್ರಮ ಜಾರಿಗೆ ಶ್ರಮಿಸುತ್ತೇವೆ. ಜನಪ್ರತಿನಿಧಿಗಳು, ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು.
ಸಂಚಾರ ದಟ್ಟಣೆ ವಾಯುವಾಲಿನ್ಯಕ್ಕೂ ಕಾರಣವಾಗಿದೆ. ಸದ್ಯ, ನಮ್ಮ ಮೆಟ್ರೋ 7 ಲಕ್ಷ ಪ್ರಯಾಣಿಕರನ್ನ ಹೊತ್ತೊಯ್ಯುತ್ತಿದೆ. ಮುಂದಿನ ಎರಡು ವರ್ಷದಲ್ಲಿ ಹತ್ತು ಲಕ್ಷ ಪ್ರಯಾಣಿಕರಿಗೆ ಅನುಕೂಲ ಮಾಡಲಾಗುವುದು. ಸ್ವಚ್ಛ ಬೆಂಗಳೂರು ಅಡಿಯಲ್ಲಿ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಮಾಡಲಾಗ್ತಿದೆ. ನನ್ನ ಕಸ ನನ್ನ ಜವಾಬ್ದಾರಿ ಅನ್ನೋ ಅರಿವು ಮೂಡಿಸಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದರು. ಇದಲ್ಲದೆ, ಎರಡು ಬೃಹತ್ ವೃಕ್ಷೋಧ್ಯಾನಗಳ ನಿರ್ಮಾಣ ಮತ್ತು ಹಸಿರು ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದಿದ್ದಾರೆ.
ಈಗಾಗಲೇ ಆಸ್ತಿ ನೋಂದಣಿಗೆ ಆನ್ಲೈನ್ ವ್ಯವಸ್ಥೆ ಮಾಡಲಾಗಿದೆ. ವಲಸಿಗರೇ ಹೆಚ್ಚಾಗಿರುವ ಹಿನ್ನೆಲೆ ನಮ್ಮ ಸಂಸ್ಕೃತಿ ಪರಿಚಿಸಲು ಕೆಲಸ ಮಾಡಲಾಗುವುದು. ಜೊತೆಗೆ, ಬೆಂಗಳೂರು ಒನ್ ಕೇಂದ್ರಗಳ ವ್ಯಾಪ್ತಿ ವಿಸ್ತರಣೆ ಮಾಡಲಾಗುವುದು. ಈ ಕಾರ್ಯಕ್ರಮಳೆಲ್ಲಾ ಎರಡು ವರ್ಷಗಳಲ್ಲಿ ಪೂರ್ತಿ ಆಗಬೇಕು. ಯಾವುದೇ ಕಾರಣಕ್ಕೂ ಹಣಕಾಸಿನ ತೊಂದರೆ ಆಗಬಾರದು ಎಂದು ತಿಳಿಸಿದ್ದಾರೆ.