ರಾಜ್ಯ

ಕಾರಣಗಳಿಲ್ಲದೆ ಶುಲ್ಕ ಪಡೆಯುತ್ತಿರುವ ಖಾಸಗಿ ಶಾಲೆಗಳು: ಡಿಸೆಂಬರ್ 20ರಂದು ಪೋಷಕರ ಪ್ರತಿಭಟನೆ

Manjula VN

ಬೆಂಗಳೂರು: ಕಾರಣಗಳಿಲ್ಲದೆಯೇ ಸುಖಾಸುಮ್ಮನೆ ಶುಲ್ಕ ಪಡೆದು ಕೊರೋನಾ ಸಾಂಕ್ರಾಮಿಕ ರೋಗದಂತಹ ಸಂಕಷ್ಟದ ಸಮಯದಲ್ಲೂ ಅಮಾನವೀಯವಾಗಿ ವರ್ತಿಸುತ್ತಿರುವ ಖಾಸಗಿ ಶಾಲೆಗಳ ದುರ್ವರ್ತನೆ ವಿರುದ್ಧ ಸಿಡಿದೆದ್ದಿರುವ ಪೋಷಕರು, ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. 

2021-2022 ಸಾಲಿನ ಪ್ರವೇಶ ಶುಲ್ಕ, ಎರಡನೇ, ಮೂರನೇ ಹಾಗೂ ನಾಲ್ಕನೆ ಅವಧಿಯ ಟ್ಯೂಷನ್ ಶುಲ್ಕ ಎಂಬ ಕಾರಣಗಳನ್ನು ನೀಡಿ ಖಾಸಗಿ ಶಾಲೆಗಳು ಪೋಷಕರಿಂದ ಶುಲ್ಕ ಕಟ್ಟಿಸಿಕೊಳ್ಳುತ್ತಿವೆ. ಕಳೆದ ನವೆಂಬರ್ 14 ರಂದು ಇದೇ ಕಾರಣಕ್ಕೆ ಪೋಷಕರು ಖಾಸಗಿ ಶಾಲೆಗಳ ವಿರುದ್ಧ ಪ್ರತಿಭಟಿಸಿದ್ದರು. ಆದರೆ, ಸರ್ಕಾರವಾಗಲೀ, ಖಾಸಗಿ ಶಾಲೆಗಳಿಂದಾಗಲೀ ಯಾವುದೇ ಧನಾತ್ಮಕ ಪ್ರತಿಕ್ರಿಯೆಗಳೂ ಬಂದಿರಲಿಲ್ಲ. ಇದೀಗ ಮತ್ತೆ ಡಿಸೆಂಬರ್ 20 ರಂದು ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿವೆ. 

ಈ ನಡುವೆ ಬೆಂಗಳೂರಿನ ಸಿಬಿಎಸ್ಇ ಹಾಗೂ ಸಿಐಎಸ್'ಸಿಇ ಶಾಲೆಗಳು ಶುಲ್ಕ ಪಾವತಿಸಿದ ಮಕ್ಕಳನ್ನು ಆನ್'ಲೈನ್ ಕ್ಲಾಸ್'ಗಳನ್ನು ನೀಡದೇ ಇರುವುದೂ ಕಂಡು ಬರುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. 

ಶುಲ್ಕ ವಿಚಾರದಲ್ಲಿ ಮಧ್ಯೆ ಪ್ರವೇಶಿಸುವುದಿಲ್ಲ ಎಂದು ಸರ್ಕಾರ ಹೇಳುವಂತಿಲ್ಲ. ಶಾಲೆಗಳು ಈಗಾಗಲೇ ಶಿಕ್ಷಕರ ಶೇ.25ರಷ್ಟು ವೇತನವನ್ನು ಕಡಿತಗೊಳಿಸುತ್ತಿದೆ. ಅಲ್ಲದೆ, ಬೋಧಕೇತರ ಸಿಬ್ಬಂದಿಗಳ ಶೇ.50ರಷ್ಟು ವೇತನವನ್ನು ಕಡಿಗೊಳಿಸುತ್ತಿದ್ದು, ಮಕ್ಕಳಿಂದ ಮಾತ್ರ ಶೇ.100ರಷ್ಟು ಶುಲ್ಕವನ್ನು ಪಡೆಯುತ್ತಿದೆ ಎಂದು ಪೋಷಕರೊಬ್ಬರು ಖಾಸಗಿ ಶಾಲೆಗಳ ದುರ್ವರ್ತನೆ ವಿರುದ್ಧ ಕಿಡಿಕಾರಿದ್ದಾರೆ. 

SCROLL FOR NEXT